ಬ್ಲಾಕ್ ಪಂಗಸ್ ಅಂದ್ರೆ ಏನು? ಇದರ ಲಕ್ಷಣಗಳು ಹೀಗಿವೆ

0

ಕೊರೊನಾ ಎರಡನೇ ಅಲೆಯು ಜನರನ್ನು ಸಾವಿನ ಕೂಪಕ್ಕೆ ತಳ್ಳುತ್ತಿದೆ. ಇಂತಹ ಸಂದರ್ಭದಲ್ಲಿ ಕೊರೊನಾದಿಂದ ಬದುಕಿ ಬಂದವರೂ ಕೂಡಾ ಬ್ಲಾಕ್ ಫಂಗಸ್ (ಮ್ಯೂಕೋರ್ ಮೈಕೋಸಿಸ್) ಖಾಯಿಲೆಯಿಂದ ಸಾಯುತ್ತಿದ್ದಾರೆ. ಬ್ಲಾಕ್ ಫಂಗಸ್ ಎಂದರೇನು ಹಾಗೂ ಅದರ ಲಕ್ಷ್ಮಣಗಳ ಬಗ್ಗೆ ಈ ಲೇಖನದಲ್ಲಿ ತಿಳಿಯೋಣ.

ಬ್ಲಾಕ್ ಫಂಗಸ್ ಕೋವಿಡ್ ಕಡಿಮೆಯಾದ ಒಂದು ಅಥವಾ ಎರಡು ವಾರಗಳಲ್ಲಿ ಕಂಡುಬರುತ್ತಿದೆ. ಕಾಯಿಲೆಯಿಂದ ಜನರು ತಮ್ಮ ದೃಷ್ಟಿಯನ್ನು ಕಳೆದುಕೊಳ್ಳುತ್ತಿದ್ದಾರೆ. ಕೋವಿಡ್ ಸೋಂಕು ಕಡಿಮೆಯಾದ ಸಕ್ಕರೆ ಕಾಯಿಲೆ ರೊಗಿಗಳಲ್ಲಿ, ಸ್ಟಿರಾಯ್ಡನ್ನು ಮನೆಯಲ್ಲೇ ತೆಗೆದುಕೊಂಡವರು ಮತ್ತು ವೈದ್ಯರ ಸೂಚನೆಯ ಮೇಲೆ ತೆಗೆದುಕೊಂಡವರು, ಹೈ ಫ್ಲೋ ಆಕ್ಸಿಜನ್ ನಲ್ಲಿ ಇದ್ದವರು, ವೆಂಟಿಲೇಟರ್ ನಲ್ಲಿ ಚಿಕಿತ್ಸೆ ಪಡೆದವರು, ಟೋಸಿಲಿಸುಮ್ಯಾಬ್ ಎಂಬ ಡ್ರಗ್ ತೆಗೆದುಕೊಂಡವರಲ್ಲಿ ಇದು ಹೆಚ್ಚಾಗಿ ಕಂಡುಬರುತ್ತಿದೆ. ಕೋವಿಡ್ ಕಡಿಮೆಯಾದ ಒಂದೆರಡು ವಾರದಲ್ಲಿ ಮುಖದ ಮೇಲೆ ನೋವು, ತಲೆನೋವು, ಮುಖದಲ್ಲಿ ಒತ್ತಡ, ಹಲ್ಲು ನೋವು ಬಂದರೆ ಇವುಗಳು ಬ್ಲಾಕ್ ಫಂಗಸ್ಸಿನ ಲಕ್ಷಣಗಳಾಗಿವೆ. ಕಾಯಿಲೆ ಮುಂದುವರೆದಾಗ ಕಣ್ಣು ಕಾಣಿಸುವುದು ಕಡಿಮೆಯಾಗುತ್ತಾ ಹೋಗುತ್ತದೆ ನಂತರದಲ್ಲಿ ಪೂರ್ತಿಯಾಗಿ ದೃಷ್ಟಿಯನ್ನು ಕಳೆದುಕೊಳ್ಳುತ್ತಾರೆ. ಮುಖದಲ್ಲಿ ಚರ್ಮದ ಮೇಲೆ ಕಪ್ಪು ಬಣ್ಣ ಕಾಣಿಸಿಕೊಳ್ಳುತ್ತದೆ. ಇದು ಕೊಳೆತು ಹೋದಾಗ ವಾಸನೆ ಕೂಡ ಬರಬಹುದು, ಮೂಗಿನಿಂದ ರಕ್ತ ಬಣ್ಣದ ಗೊಣ್ಣೆ ಬರಬಹುದು. ರೋಗಿಗಳಲ್ಲಿ ತಲೆನೋವು ತೀವ್ರವಾಗಿ ಕಾಣಿಸಿಕೊಳ್ಳುತ್ತದೆ. ಅಂಗುಳದಲ್ಲಿ ಕಪ್ಪಾಗುವುದು ಇದು ಹೆಚ್ಚಾದಾಗ ತೂತು ಕೂಡ ಆಗಬಹುದು. ಈ ಎಲ್ಲಾ ಲಕ್ಷಣಗಳು ಕಾಯಿಲೆ ಹೆಚ್ಚಾಗಿದೆ ಎಂಬುದನ್ನು ತಿಳಿಸುತ್ತದೆ.

ಕಣ್ಣು ಮತ್ತು ಮೂಗು ತಜ್ಞ ವೈದ್ಯರ ಬಳಿ ಹೋದಾಗ ಕ್ಯಾಮರಾವನ್ನು ಮೂಗಲ್ಲಿ ಹಾಕಿ ಎಂಡೋಸ್ಕೋಪಿ ಅಥವಾ ಬಯೋಪ್ಸಿ ತೆಗೆಯಲಾಗುತ್ತದೆ. ಇದರ ವರದಿ ಪಾಸಿಟಿವ್ ಬಂದರೆ ತಕ್ಷಣದಲ್ಲಿ ಶಸ್ತ್ರಚಿಕಿತ್ಸೆ ಮಾಡಿ ಕಣ್ಣಿನ ಮೇಲೆ ಎಷ್ಟು ಪರಿಣಾಮ ಬೀರಿದೆ ಎನ್ನುವುದನ್ನು ನೋಡಿಕೊಂಡು ಸೋಂಕು ಹೆಚ್ಚಿದ್ದರೆ ಕಣ್ಣುಗಳನ್ನು ಸಹ ತೆಗೆಯಬೇಕಾಗಬಹುದು. ಶಸ್ತ್ರಚಿಕಿತ್ಸೆಯ ನಂತರ ರೋಗಿಗೆ ಆಮ್ ಫೋಟೆರಿಸಿನ್-ಬಿ ಎಂಬ ಡ್ರಗ್ ನೀಡಲಾಗುತ್ತದೆ. ಇದನ್ನು 4 ರಿಂದ 6 ವಾರದವರೆಗೂ ನೀಡಬಹುದು. ಆಮ್ ಫೋಟೆರಿಸಿನ್-ಬಿ ಮಾರುಕಟ್ಟೆಯಲ್ಲಿ ಕಡಿಮೆ ಸಿಗುತ್ತಿದ್ದು ತುಂಬಾ ದುಬಾರಿಯಾಗಿದೆ. ಇದರಿಂದ ಜನಸಾಮಾನ್ಯರಿಗೆ ಇದನ್ನು ಪಡೆಯಲು ಸಾಧ್ಯವಾಗುತ್ತಿಲ್ಲ.

ಕೆಲ ವಾರಗಳಿಂದ ಬ್ಲಾಕ್ ಫಂಗಸ್ಸ್ ಸೋಂಕಿತರು ಆಸ್ಪತ್ರೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ದಾಖಲಾಗುತ್ತಿದ್ದು ಇದಕ್ಕೋಸ್ಕರ ಪ್ರತ್ಯೇಕ ವಾರ್ಡ್ ನ್ನು ಮೀಸಲು ಇಡುವಂತಹ ಪರಿಸ್ಥಿತಿ ಬಂದೊದಗಿದೆ. ವೈದ್ಯರು ಪ್ರತ್ಯೇಕ ತಂಡ ಮಾಡಿಕೊಂಡು ಬ್ಲಾಕ್ ಫಂಗಸ್ ರೋಗಿಗಳಗೆ ಚಿಕಿತ್ಸೆ ನೀಡಲಾಗುತ್ತಿದೆ. ಇಂತಹ ಲಕ್ಷಣಗಳು ಕಂಡಾಗ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯಬೇಕು. ಮತ್ತು ಈ ಸೋಂಕುಗಳಿಗೆ ಮೂಲ ಕೋವಿಡ್ ಆದ್ದರಿಂದ ಇದು ಬರದಂತೆ ಮುಂಜಾಗ್ರತೆ ವಹಿಸುವುದು ಅನಿವಾರ್ಯವಾಗಿದೆ.

Leave A Reply

Your email address will not be published.

error: Content is protected !!