ಪ್ರಪಂಚದಲ್ಲೇ ಏಕೈಕ ಪುರುಷಾಂಗದ ಆಕಾರದಲ್ಲಿರುವ ಶಿವಲಿಂಗ, ಇದು ಎಲ್ಲಿದೆ ಗೊತ್ತಾ..

0

ನಮ್ಮ ಸನಾತನ ಹಿಂದೂ ಧರ್ಮದಲ್ಲಿ ಮುಕ್ಕೋಟಿ ದೇವರನ್ನು ಆರಾಧಿಸಲಾಗುತ್ತದೆ. ದೇವಾನುದೇವತೆಗಳಲ್ಲಿ ಶಿವ ಪರಮಾತ್ಮನು ಬಹಳ ವಿಶೇಷ ಸ್ಥಾನವನ್ನು ಪಡೆದಿದ್ದಾರೆ. ಕೆಲವು ಶಿವ ದೇವಾಲಯಗಳು ತಮ್ಮದೆ ಆದ ವಿಶೇಷತೆಯನ್ನು ಹೊಂದಿದೆ. ಅಂತದ್ದೆ ವಿಶೇಷತೆ ಹೊಂದಿದ ಶಿವ ದೇವಾಲಯದ ಬಗ್ಗೆ ಈ ಲೇಖನದಲ್ಲಿ ನೋಡೋಣ.

ಮೊದಲಿನಿಂದಲೂ ಶಿವನನ್ನು ಸೃಷ್ಠಿ, ಕ್ರಿಯೆಯ ಪ್ರತಿರೂಪವಾಗಿರುವ ಲಿಂಗದ ರೂಪದಲ್ಲಿ ಆರಾಧನೆ ಮಾಡುವ ಪದ್ಧತಿ ಜಾರಿಯಲ್ಲಿದೆ. ನಮ್ಮ ರಾಜ್ಯ ಕರ್ನಾಟಕ ಹಾಗೂ ಜಗತ್ತಿನ ನಾನಾ ಕಡೆ ಶಿವನ ದೇವಾಲಯ ರಾರಾಜಿಸುತ್ತಿದೆ ಹಲವು ಶಿವನ ದೇವಾಲಯಗಳು ವಿಸ್ಮಯಗಳಿಂದ ಕೂಡಿದೆ. ಆಂಧ್ರಪ್ರದೇಶ ರಾಜ್ಯದ ಚಿತ್ತೂರು ಜಿಲ್ಲೆಯ ಗುಡಿಮಲ್ಲಂ ಎಂಬ ಊರಿನ ಸ್ವರ್ಣಮುಖಿ ನದಿಯ ತೀರದಲ್ಲಿ ಪರಶುರಾಮೇಶ್ವರ ಎಂಬ ದೇವಾಲಯವಿದೆ.

ಪ್ರಪಂಚದಲ್ಲಿ ಎಲ್ಲಿಯೂ ನೋಡಿರದ ಕೇಳಿರದ ಪುರುಷಲಿಂಗವನ್ನು ಹೋಲುವ ಶಿವಲಿಂಗವನ್ನು ಇಲ್ಲಿ ನೋಡಬಹುದು. ತ್ರಿಮೂರ್ತಿಗಳಾದ ಬ್ರಹ್ಮ, ವಿಷ್ಣು, ಮಹೇಶ್ವರರು ಈ ಶಿವಲಿಂಗದಲ್ಲಿ ಸಂಗಮಗೊಂಡು ನೆಲೆಸಿದ್ದಾರೆ ಎಂಬ ಪ್ರತೀತಿ ಇದೆ ಅಲ್ಲದೆ ಈ ಶಿವಲಿಂಗ ಭಾರತದ ಮೊದಲ ಶಿವಲಿಂಗ ಎಂಬ ಖ್ಯಾತಿ ಪಡೆದಿದೆ. ಈ ಕ್ಷೇತ್ರ ತಿರುಪತಿಗೆ 30 ಕಿಮೀ ದೂರದಲ್ಲಿದೆ.

ಸಾಮಾನ್ಯವಾಗಿ ತಿರುಪತಿಗೆ ತೆರಳಿ ವೆಂಕಟೇಶ್ವರ ಸ್ವಾಮಿಯ ದರ್ಶನ ಪಡೆದು ಹೋಗುತ್ತಾರೆ ಅಧಿಕ ಜನರಿಗೆ ಗುಡಿಮಲ್ಲಂ ಪರಶುರಾಮೇಶ್ವರ ದೇವಾಲಯದ ಬಗ್ಗೆ ತಿಳಿದಿಲ್ಲ. ಇಲ್ಲಿ ಕಂಡುಬರುವ ಶಿವಲಿಂಗ ಕ್ರಿ. ಪೂ 1 ನೇ ಶತಮಾನಕ್ಕಿಂತ ಹಳೆಯದು, ಶಿವಲಿಂಗ ಸುಮಾರು 5 ಅಡಿ ಎತ್ತರವಿದೆ ಅಲ್ಲದೆ ಭೂಮಿಯಿಂದ 6 ಅಡಿಯಷ್ಟು ಕೆಳಗೆ ಬೆಳೆದಿದೆ. ಶಿವಲಿಂಗಕ್ಕೆ ಒರಗಿಕೊಂಡಂತೆ ಪರಶುವನ್ನು ಹಿಡಿದ ಪರಶುರಾಮನನ್ನು ಕಾಣಬಹುದು.

ಗುರು ಪರಶುರಾಮರು ವಿಷ್ಣುವಿನ ದಶಾವತಾರಗಳಲ್ಲಿ ಬರುವ ಒಂದು ಪ್ರಮುಖ ಅವತಾರ. ಪರಶುರಾಮರ ಕೆಳಭಾಗದಲ್ಲಿ ಪುರುಷನೊಬ್ಬ ಮಂಡಿಯೂರಿ ಕುಳಿತಿರುವುದನ್ನು ನೋಡಬಹುದು ಅವರು ಯಕ್ಷ ರೂಪದಲ್ಲಿರುವ ಬ್ರಹ್ಮ ದೇವ. ಯಕ್ಷ ರೂಪದಲ್ಲಿ ಬ್ರಹ್ಮ ದೇವ, ಪರಶುರಾಮನ ರೂಪದಲ್ಲಿ ವಿಷ್ಣು ದೇವ, ಲಿಂಗ ರೂಪದಲ್ಲಿ ಶಿವ ಪರಮಾತ್ಮರು ಒಟ್ಟಿಗೆ ಒಂದೆ ಲಿಂಗದಲ್ಲಿ ಸಂಗಮಗೊಂಡು ದರ್ಶನ ನೀಡುತ್ತಿದ್ದಾರೆ. ಪರಶುರಾಮರು ತಮ್ಮ ತಾಯಿಯ ಶಿರಚ್ಛೇದನ ಮಾಡಿದ ನಂತರ ಪಾಪಪ್ರಜ್ಞೆಯಿಂದ ಬಳಲುತ್ತಿರುತ್ತಾರೆ.

ಪಾಪಪ್ರಜ್ಞೆಯನ್ನು ಕಳೆಯಲು ಈ ಸ್ಥಳಕ್ಕೆ ಬಂದು ಶಿವಲಿಂಗವನ್ನು ನಿರ್ಮಿಸಿ ಪಕ್ಕದಲ್ಲಿದ್ದ ಕಲ್ಯಾಣಿಯಿಂದ ನೀರನ್ನು ತಂದು ಪೂಜಿಸಿದರು. ಕಲ್ಯಾಣಿಯಲ್ಲಿ ಪ್ರತಿದಿನ ಒಂದು ಕಮಲದ ಪುಷ್ಪ ಅರಳುತ್ತಿರುತ್ತದೆ. ಆ ಪುಷ್ಪವನ್ನು ಪರಶುರಾಮರು ಶಿವ ಪರಮಾತ್ಮನಿಗೆ ಅರ್ಪಿಸುತ್ತಾರೆ. ದಿನವೂ ಒಂದು ಕಮಲ ಮಾತ್ರ ಅರಳುವುದರಿಂದ ಪರಶುರಾಮರು ಕಮಲ ಪುಷ್ಪದ ಕಾವಲಿಗೆ ಚಿತ್ರಸೇನ ಎಂಬ ಯಕ್ಷನನ್ನು ನೇಮಿಸುತ್ತಾರೆ.

ಯಕ್ಷನು ಕಮಲ ಪುಷ್ಪವನ್ನು ಕಾಯಬೇಕಾದರೆ ಪ್ರತಿನಿತ್ಯವೂ ತನಗಾಗಿ ಒಂದು ಮಡಿಕೆ ಹೆಂಡ ಹಾಗೂ ಒಂದು ಪ್ರಾಣಿಯನ್ನು ಅರ್ಪಿಸಬೇಕೆಂಬ ಷರತ್ತನ್ನು ವಿಧಿಸುತ್ತಾನೆ. ಗುರು ಪರಶುರಾಮರು ಯಕ್ಷನ ಷರತ್ತಿಗೆ ಸಮ್ಮತಿಸುತ್ತಾರೆ. ಹೀಗೆ ಒಂದು ದಿನ ಪರಶುರಾಮ ಯಕ್ಷನಿಗೆ ಅರ್ಪಿಸಲು ಪ್ರಾಣಿಯ ಭೇಟೆಗೆ ತೆರಳಿದಾಗ ಯಕ್ಷನು ಖುದ್ದಾಗಿ ಕಮಲ ಪುಷ್ಪವನ್ನು ಕಿತ್ತು ತಾನೆ ಶಿವಲಿಂಗಕ್ಕೆ ಅರ್ಪಿಸಿ ಪೂಜಿಸುತ್ತಾನೆ. ಮರಳಿ ಬಂದ ಪರಶುರಾಮ ಕೊಳದಲ್ಲಿ ಕಮಲ ಇಲ್ಲದೆ ಇರುವುದನ್ನು ನೋಡಿ ಯಕ್ಷನೊಂದಿಗೆ ಘನಘೋರ ಯುದ್ಧ ಮಾಡುತ್ತಾನೆ.

ಯಕ್ಷನನ್ನು ಸಂಹಾರ ಮಾಡಬೇಕೆನ್ನುವಷ್ಟರಲ್ಲಿ ಶಿವ ಪರಮಾತ್ಮ ಪ್ರತ್ಯಕ್ಷನಾಗಿ ಜಗಳವನ್ನು ನಿಲ್ಲಿಸುತ್ತಾನೆ. ಬ್ರಹ್ಮ ದೇವನು ಶಾಪಗ್ರಸ್ಥನಾಗಿ ಯಕ್ಷನ ರೂಪವನ್ನು ತಾಳಿರುತ್ತಾನೆ. ಯಕ್ಷ ರೂಪದ ಬ್ರಹ್ಮ, ಪರಶುರಾಮ ರೂಪದ ವಿಷ್ಣು ದೇವ ಲಿಂಗ ರೂಪಿ ಶಿವ ಪರಮಾತ್ಮನೊಂದಿಗೆ ವಿಲೀನಗೊಳ್ಳುತ್ತಾರೆ ಶಿವಲಿಂಗವನ್ನು ಪರಶುರಾಮ ಪ್ರತಿಷ್ಠಾಪಿಸುವುದರಿಂದ ಪರಶುರಾಮೇಶ್ವರ ಎಂದು ಪೂಜಿಸಲಾಗುತ್ತದೆ.

ಶಿವಲಿಂಗವು ಗೋಧಿ ಬಣ್ಣದ ಕಲ್ಲಿನಿಂದ ನಿರ್ಮಾಣಗೊಂಡಿದ್ದು ಶಾತವಾಹನರು ಕ್ರಿ.ಪೂ 2 ಅಥವಾ 3 ನೆ ಶತಮಾನದಲ್ಲಿ ದೇಗುಲವನ್ನು ನಿರ್ಮಿಸಿದ್ದಾರೆ ಎಂಬ ಪ್ರತೀತಿ ಇದೆ. ಈ ದೇಗುಲದಲ್ಲಿ ಪೂರ್ವಜರು ವಾಸ್ತುಶಾಸ್ತ್ರ, ಭೂಗರ್ಭ ಶಾಸ್ತ್ರದ ಬಗ್ಗೆ ಹೊಂದಿದ ಪಾಂಡಿತ್ಯವನ್ನು ನೋಡಬಹುದು. ಪ್ರತಿವರ್ಷ ಸೂರ್ಯನು ಉತ್ತರಾಯನದಿಂದ ದಕ್ಷಿಣಾಯನಕ್ಕೆ ತನ್ನ ಪಥವನ್ನು ಬದಲಾಯಿಸುವ ಸಮಯದಲ್ಲಿ ಅಂದರೆ ಡಿಸೆಂಬರ್ ತಿಂಗಳಿನ ಒಂದು ಮುಂಜಾನೆ ಸೂರ್ಯ ರಶ್ಮಿಯು ಒಂದು ಕಿಂಡಿಯ ಮೂಲಕ ನೇರವಾಗಿ ಶಿವಲಿಂಗವನ್ನು ಸ್ಪರ್ಷಿಸುತ್ತಾನೆ.

ಪರಶುರಾಮೇಶ್ವರ ಲಿಂಗದ ಕೆಳಗೆ ಒಂದು ಆಯತಾಕಾರದ ತೊಟ್ಟಿಯಿದೆ ಪ್ರತಿ 60 ವರ್ಷಗಳಿಗೊಮ್ಮೆ ಸ್ವರ್ಣಮುಖಿ ನದಿಯ ನೀರು ಈ ತೊಟ್ಟಿಗೆ ಹರಿದುಬಂದು ಸಂಪೂರ್ಣವಾಗಿ ತುಂಬಿಹೋಗುತ್ತದೆ. ನಂತರ ನದಿಯ ನೀರು ಶಿವಲಿಂಗದ ಪಾದವನ್ನು ತೊಳೆಯುತ್ತದೆ. ಒಮ್ಮೆ ಈ ದೇವಾಲಯಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆಯಿರಿ.

Leave A Reply

Your email address will not be published.

error: Content is protected !!