ಸುಧಾ ಮೂರ್ತಿ ಇವರು ಕರ್ನಾಟಕ ಕಂಡ ಶ್ರೇಷ್ಠ ಮಹಿಳೆಯರಲ್ಲಿ ಒಬ್ಬರು. ಬದುಕು ಬಡತನದಲ್ಲಿ ಆರಂಭವಾದರೂ ಸಹ ಮುಂದುವರೆಯುತ್ತಿರುವುದು ಮಾತ್ರ ಪರಿಶುದ್ಧ ಹಾಗೂ ಗರ್ವ ಇಲ್ಲದ ಶ್ರೀಮಂತಿಕೆಯಲ್ಲಿ. ಬಡವರಿಗೆ ನೊಂದವರಿಗೆ ಅದೆಷ್ಟೋ ಮಂದಿ ಸಂತ್ರಸ್ತರ ನೆರವಿಗೆ ಬರುವುದರ ಮೂಲಕ ತನ್ನ ಮಾತೃ ಹೃದಯದಿಂದಲೇ ಅಪಾರ ಪ್ರೀತಿಯನ್ನು ಹಂಚುತ್ತಿದ್ದಾರೆ ಸುಧಾ ಮೂರ್ತಿ ಅಮ್ಮ. ಜಗತ್ತಿನ ಶ್ರೀಮಂತರ ಪಟ್ಟಿಯಲ್ಲಿ ಉನ್ನತ ಸ್ಥಾನದಲ್ಲಿದ್ದರೂ ಸದಾಕಾಲ ತಾಯಿ ಭಾಷೆ, ತಾಯಿ ನೆಲದ ಋಣ ತೀರಿಸುವ ಕೆಲಸ ಮಾಡುತ್ತಲೇ ಇರುತ್ತಾರೆ.ಮಾಹಿತಿ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಅಗ್ರಜ ಎನಿಸಿಕೊಂಡಿರುವ ಇನ್ಫೋಸಿಸ್ ಸಂಸ್ಥೆಯ ಒಡತಿಯಾಗಿದ್ದರೂ ಸಹ ತನ್ನನು ತಾನು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವುದು ಮಾತ್ರವಲ್ಲದೇ ಒಬ್ಬ ಉತ್ತಮ ಬರಹಗಾರ್ತಿಯಾಗಿ ಕನ್ನಡ ಸಾಹಿತ್ಯ ಕ್ಷೇತ್ರದಲ್ಲೂ ಛಾಪು ಮೂಡಿಸಿ ಹಣ , ಶ್ರೀಮಂತಿಕೆ ಬದುಕಿನ ಒಂದು ಭಾಗವಷ್ಟೇ ಎನ್ನುವುದನ್ನು ಸದಾ ನಿರೂಪಿಸುತ್ತಿದ್ದಾರೆ ಸುಧಾ ಮೂರ್ತಿ ಅವರು. ಇಂತಹ ಹೃದಯ ವೈಶಾಲ್ಯತೆ ಹೊಂದಿರುವ ವ್ಯಕ್ತಿಯ ಬಗ್ಗೆ ನಮ್ಮಲ್ಲಿ ಇವರು ನಮಗೆ ಚಿರಪರಿಚಿತರು ಎನ್ನುವವರು ಯಾರೊಬ್ಬರೂ ಇಲ್ಲ ಎಲ್ಲಾ ಜನರಿಗೂ ಸುಧಾ ಮೂರ್ತಿ ಅವರು ಪರಿಚಿತ ವ್ಯಕ್ತಿ. ಇವರ ಬಗ್ಗೆ ನಾವು ಈ ಲೇಖನದಲ್ಲಿ ಸಂಪೂರ್ಣವಾಗಿ ಅಲ್ಲದೇ ಹೋದರೂ ಅಲ್ಪ ಪ್ರಮಾಣದಲ್ಲಿ ಆದರೂ ತಿಳಿದುಕೊಳ್ಳುವ ಪ್ರಯತ್ನವನ್ನು ಮಾಡೋಣ.

1950 ರ ಆಗಸ್ಟ್‌ 19 ರಂದು ಹಾವೇರಿ ಜಿಲ್ಲೆಯ ಶಿಗ್ಗಾಂವ್‌ ಗ್ರಾಮದ ಕುಲಕರ್ಣಿ ಮನೆತನದಲ್ಲಿ ಜನಿಸಿದವರು. ಹುಬ್ಬಳ್ಳಿಯ ಬಿ ವಿ ಬಿ ಕಾಲೇಜಿನಿಂದ ಎಂಜನಿಯರಿಂಗ್‌ ಬಿ ಇ (ಎಲೆಕ್ಟ್ರಿಕಲ್‌) ಬೆಂಗಳೂರಿನ ಟಾಟಾ ವಿಜ್ಞಾನ ಮಂದಿರ ಇಲ್ಲಿಂದ ಎಂ ಇ ಪದವಿ ಪಡೆದಿದ್ದಾರೆ. ಸುಧಾ ಅವರು ಬೆಂಗಳೂರಿನ ಟಾಟಾ ಇನ್ಸ್ಟಿ ಟ್ಯೂಟ್ ನಲ್ಲಿ ಕಂಪ್ಯೂಟರ್ ಸೈನ್ಸ್ ಪದವಿ ಗಳಿಸಿ ಚಿನ್ನದ ಪದಕ ಗಳಿಸಿದ ಏಕೈಕ ಮಹಿಳಾ ವಿದ್ಯಾರ್ಥಿನಿ. ಸುಧಾಮೂರ್ತಿ ಅವರು ಬೆಂಗಳೂರಿನ ಇನ್ಫೋಸಿಸ್ ಸಂಸ್ಥೆಯನ್ನು ತಮ್ಮ ಪತಿ, ಹಾಗೂ ಅವರ ಜೊತೆಗಾರರ ಸಹಯೋಗದಿಂದ ಕಟ್ಟಿ ಬೆಳೆಸಿದ ಸಾಧಕಿ. ಸುಧಾ ಮೂರ್ತಿಯವರು ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ ಹಲವು ಕೃತಿಗಳನ್ನು ಪ್ರಕಟಿಸಿದ್ದಾರೆ. ಕಲವು ಕೃತಿಗಳು ಕನ್ನಡ ಪತ್ರಿಕೆಗಳಲ್ಲಿ ಧಾರಾವಾಹಿಯಾಗಿ ಪ್ರಕಟವಾಗಿವೆ. ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಇವರ ಕೊಡುಗೆ ಅಪಾರ. ದೇಶ ವಿದೇಶಗಳಿಂದ ತಮ್ಮ ಸಾಧನೆಗೆ ಪ್ರಶಸ್ತಿ ಪಡೆದ ಸುಧಾ ಮೂರ್ತಿ ಅವರು ಭಾರತದ ಅತ್ಯಂತ ಶ್ರೇಷ್ಠ ಪ್ರಶಸ್ತಿ ಆದ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರು. ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿ ಪುರಸ್ಕಾರಗಳು ಇವರ ಸಾಧನೆಯನ್ನು ಗುರುತಿಸಿ ಹುಡುಕಿಕೊಂಡು ಬಂದಿವೆ.

1996ರಲ್ಲಿ ತಮ್ಮ ಪತಿ ಶ್ರೀ ನಾರಾಯಣಮೂರ್ತಿ ಅವರ ಜೊತೆಗೂಡಿ ಇನ್ಫೋಸಿಸ್ ಫೌಂಡೇಶನ್ ಅನ್ನು ಆರಂಭಿಸದರು. ದೇವದಾಸಿ ಪದ್ದತಿಯ ವಿರುದ್ಧ ಹೋರಾಡಿ ನಿರ್ಮೂಲನೆ ಮಾಡುವಲ್ಲಿ ಯಶಸ್ವಿಯಾದವರು ಸುಧಾಮೂರ್ತಿ ಅವರು. ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷರೂ ಮತ್ತು ಗೇಟ್ಸ್ ಪ್ರತಿಷ್ಠಾನದ ಸಾರ್ವಜನಿಕ ಆರೋಗ್ಯ ಉಪಕ್ರಮಗಳ ಸದಸ್ಯರಾಗಿದ್ದಾರೆ ಸುಧಾ ಮೂರ್ತಿ ಅವರು. ಸುಧಾ ಮೂರ್ತಿ ಅವರು ವೃತ್ತಿ ಜೀವನ ಆರಂಭಿಸುವ ದಿನಗಳಲ್ಲಿ ವಿಪ್ರೊ ಸಂಸ್ಥೆ ನಾರಾಯಣಮೂರ್ತಿ ಅವರಿಗೆ ಕೆಲಸ ನೀಡಲು ನಿರಾಕರಿಸಿತ್ತು ಇಂದು ಅದೇ ವ್ಯಕ್ತಿ ಸಾವಿರಾರು ಕೋಟಿಯ ಒಡೆಯರಾಗಿ ಸಾವಿರಾರು ಜನರಿಗೆ ಕೆಲಸ ನೀಡಲು ಸುಧಾ ಅವರ ತ್ಯಾಗ ಪ್ರೀತಿ ಮತ್ತು ನಂಬಿಕೆಯೇ ಕಾರಣ ಎನ್ನುವುದನ್ನು ಮರೆಯುವಂತಿಲ್ಲ. ಪ್ರವಾಹ ಸಂತ್ರಸ್ತರಿಗೆ ಕೊರೋನಾ ಪೀಡಿತರಿಗೆ ತಮ್ಮ ಸಂಸ್ಥೆಯಿಂದ ಸೂರು ಕಲ್ಪಿಸಿ ಅಗತ್ಯ ವಸ್ತುಗಳನ್ನು ಪೂರೈಸುವ ಮೂಲಕ ಮಾತೃ ಹೃದಯದ ಪ್ರೀತಿಯನ್ನು ಸಮಾಜಕ್ಕೆ ಪರಿಚಯಿಸಿದ್ದಾರೆ. ನಾರಾಯಣ ಮೂರ್ತಿ ಹಾಗೂ ಸುಧಾ ಮೂರ್ತಿ ದಂಪತಿಗಳಿಗೆ ರೋಹನ್ ಹಾಗೂ ಅಕ್ಷರಾ ಎಂಬ ಇಬ್ಬರು ಮಕ್ಕಳಿದ್ದಾರೆ.

ಸುಧಾಮೂರ್ತಿ ಅವರ ಪ್ರಕಾರ, ಏನನ್ನಾದರೂ ಸಾಧಿಸಬೇಕೆಂದು ಹೊರಟವನಿಗೆ ಪ್ರಮುಖವಾಗಿ ಧೈರ್ಯ ಮತ್ತು ಪರಿಶ್ರಮ ಪಡುವ ಗುಣ ಇರಬೇಕಂತೆ. ಬದುಕೆಂಬ ಚದುರಂಗದಾಟದಲ್ಲಿ ನಾವು ಎಷ್ಟು ಬುದ್ಧಿವಂತರಿದ್ದೀವೆ? ಎಷ್ಟು ಚೆನ್ನಾಗಿದ್ದೀವಿ ಅಥವಾ ಎಷ್ಟು ಚೆನ್ನಾಗಿ ಸಂಪರ್ಕಗಳನ್ನು ಹೊಂದಿದ್ದೇವೆ? ಎಂಬುದು ಲೆಕ್ಕಕ್ಕೆ ಬರುವುದಿಲ್ಲ. ಪರಿಶ್ರಮ ಪಟ್ಟು ಕೆಲಸ ಮಾಡಲು ನಾವು ಎಷ್ಟು ಸಮರ್ಥರು ಹಾಗೂ ಯಾರೇ ಬಡಿದರೂ ಚುಚ್ಚಿದರೂ ಆಡಿದರೂ ಜಗ್ಗದಂಥ ಧೈರ್ಯದ ಅಣೆಕಟ್ಟೆ ಇದ್ದರೆ ಮಾತ್ರ ಯಶಸ್ವಿ ವ್ಯಕ್ತಿಗಳಾಗಬಹುದು. ಜೀವನದಲ್ಲಿ ನಾವು ಎಷ್ಟೋ ಬಾರಿ ಹಣ ಆಸ್ತಿ ಸಂಪಾದಿಸಬೇಕು ಎಂಬ ಭರದಲ್ಲಿ ನಮ್ಮಲ್ಲಿದ್ದ ಮೌಲ್ಯಗಳನ್ನು ಗಾಳಿಗೆ ತೂರುತ್ತೇವೆ. ಪರಿಣಾಮ ಸಂಬಂಧಗಳು ಅಳಿಸುತ್ತವೆ ಎಲ್ಲರೂ ದೂರ ಆಗುತ್ತಾರೆ. ಸಾಧನೆಯ ಹಾದಿ ಹಿಡಿದವರು ಎಲ್ಲ ಕಳೆದುಕೊಂಡು ತೊಳಲಾಡುತ್ತಾರೆ. ಅದಕ್ಕೆ ಸಾಧನೆ, ಹಣ, ಪ್ರಶಸ್ತಿ ಅಥವಾ ಪದವಿಗಳನ್ನು ಹೊಂದಿರುವುದಕ್ಕಿಂತ ಮುಖ್ಯವಾಗಿ ಒಳ್ಳೆಯ ಸಂಬಂಧ, ಸಹಾನುಭೂತಿಯನ್ನು ಹಾಗೂ ಮನಃಶಾಂತಿಯನ್ನು ಹೊಂದಬೇಕು. ಆಗ
ತಾನಾಗಿಯೇ ಸಕಲವೂ ಒಲಿದು ಬರುತ್ತದೆ ಎಂದು ಹೇಳುತ್ತಾರೆ ಸುಧಾ ಮೂರ್ತಿ ಅವರು. ಸಾವಿರಾರು ಕೋಟಿಯ ಒಡತಿಯಾಗಿದ್ದರೂ ತನ್ನ ಸರಳತೆ ಸಜ್ಜನಿಕೆಯಿಂದ ಜನರ ಮನಸ್ಸಿಗೆ ಹತ್ತಿರವಾಗುತ್ತಾ ಆದರ್ಶ ವ್ಯಕ್ತಿಯಾಗಿದ್ದಾರೆ ಸುಧಾಮೂರ್ತಿಯವರು.ಇವರ ಈ ಸ್ವಪ್ರೇರಿತ ಕಾರ್ಯಗಳು ಹೀಗೆ ಮುಂದುವರೆಯಲಿ ಹಾಗೂ ಮತ್ತಷ್ಟು ಜನರಿಗೆ ಮಾದರಿಯಾಗಲಿ.

By admin

Leave a Reply

Your email address will not be published. Required fields are marked *

error: Content is protected !!
Footer code: