WhatsApp Group Join Now
Telegram Group Join Now

ಬಾಳೆ ನಮ್ಮ ರಾಜ್ಯದಲ್ಲಿ ಬೆಳೆಯುವ ಪ್ರಮುಖ ವಾಣಿಜ್ಯ ಬೆಳೆ ಅನೇಕ ರೈತರು ಇದನ್ನು ಬೆಳೆಯುವುದರಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಎಲ್ಲರಿಗೂ ತಿಳಿದಿರುವ ಹಾಗೆ ಮಾರುಕಟ್ಟೆಯಲ್ಲಿ ಬಾಳೆಗೆ ಯಾವಾಗಲೂ ಬೆಲೆ ಇರುತ್ತದೆ. ನೀವು ಮಾರುಕಟ್ಟೆಯಲ್ಲಿ ಬಾಳೆಯ ಹತ್ತಾರು ತಳಿಗಳನ್ನು ನೋಡಬಹುದು. ರೈತರು ಹವಾಮಾನ ಮಣ್ಣಿನ ಗುಣ ಮತ್ತು ಮಾರುಕಟ್ಟೆಯ ಬೇಡಿಕೆಯನ್ನು ಆಧರಿಸಿ ವಿವಿಧ ತಳಿಗಳನ್ನು ಆಯ್ದುಕೊಂಡು ಬೇಸಾಯ ಮಾಡುವುದನ್ನು ನೀವು ನೋಡಬಹುದು.

ಬಾಳೆ ಬೆಳೆಗಳನ್ನು ನೋಡುತ್ತಾ ಹೋದಂತೆ ಇಂದು ರಾಜ್ಯದಲ್ಲಿ ಜೀ ನೈನ್ ಬಾಳೆಯನ್ನು ಬೆಳೆಯುವವರ ಸಂಖ್ಯೆ ಹೆಚ್ಚಿದೆ. ಸಾಮಾನ್ಯವಾಗಿ ರೈತರು ಬಾಳೆಯನ್ನು ಸ್ಥಳೀಯವಾಗಿ ಮಾರಾಟ ಮಾಡುವುದು ಹೆಚ್ಚು ಆದರೆ ಬೆರಳೆಣಿಕೆಯಷ್ಟು ರೈತರು ರಪ್ತು ಗುಣಮಟ್ಟದ ಬಾಳೆಯನ್ನು ಬೆಳೆದು ಒಳ್ಳೆಯ ಆದಾಯವನ್ನ ಗಳಿಸುತ್ತಿದ್ದಾರೆ ಅಂತವರಲ್ಲಿ ಮೊದಲ ಪ್ರಯತ್ನದಲ್ಲೇ ಯಶಸ್ಸನ್ನು ಕಂಡ ಯುವ ರೈತನ ಬಗ್ಗೆ ನಾವಿಂದು ನಿಮಗೆ ತಿಳಿಸಿಕೊಡುತ್ತೇವೆ.

ಈತ ಸಿವಿಲ್ ಇಂಜಿನಿಯರ್ ಕಳೆದ ವರ್ಷವಷ್ಟೇ ಪದವಿ ಮುಗಿಸಿದ್ದಾನೆ ಯಾವುದೋ ಕಂಪನಿಯಲ್ಲಿ ಕೆಲಸ ಮಾಡಬೇಕಾದ ಈ ಯುವಕ ಕೃಷಿಯಲ್ಲಿ ತೊಡಗಿಕೊಳ್ಳುವ ಮೂಲಕ ಇಂದು ಹತ್ತು ಊರಿಗೆ ಮಾದರಿಯಾಗಿದ್ದಾನೆ. ಮೊದಲಬಾರಿಗೆ ಈತ ಬೆಳೆದ ಬಾಳೆ ಹೊರದೇಶಕ್ಕೆ ಹೊರಟು ನಿಂತಿದ್ದು ಅಧಿಕ ಆದಾಯ ಇವರ ಕೈಸೇರಲಿದೆ. ಇವರು ತೋಟ ಇರುವುದು ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಹಲಗಲಿಯಲ್ಲಿ.

ಅಚ್ಚ ಹಸುರಿನಿಂದ ಕಂಗೊಳಿಸುವ ತೋಟ, ಕಣ್ಣಿಗೆ ಹಬ್ಬವನ್ನುಂಟು ಮಾಡುವ ಬಾಳೆಗೊನೆಗಳು. ಅಲ್ಲಿನ ಸ್ಥಳೀಯ ರೈತರು ನಿರಂತರವಾಗಿ ಈ ಬಾಳೆ ತೋಟಕ್ಕೆ ಭೇಟಿಯನ್ನು ನೀಡುತ್ತಿರುತ್ತಾರೆ ಹೀಗೆ ದಾರಿ ಹೋಕರನ್ನು ಕೈಬೀಸಿ ತನ್ನತ್ತ ಕರೆಯುತ್ತಿದೆ ಈ ತೋಟದ ಸೌಂದರ್ಯ. ಈ ರೀತಿಯ ತೋಟವನ್ನ ಬೆಳೆದಿರುವುದು ಅನುಭವಿ ರೈತರಲ್ಲ ಚಿಗುರು ಮೀಸೆಯ ಹುಡುಗ ಅವರ ಹೆಸರು ಓಂಕಾರ್ ಉದಯ್ ಕುಲಕರ್ಣಿ ವಯಸ್ಸು ಇನ್ನೂ ಕೇವಲ ಇಪ್ಪತ್ಮೂರು.

ಶಿಕ್ಷಣ ಮುಗಿಯುತ್ತಿದ್ದಂತೆಯೇ ಭೂದೇವಿಯ ಕರೆಗೆ ಓಗೊಟ್ಟು ಕೃಷಿ ಕಾರ್ಯದಲ್ಲಿ ನಿರತರಾಗಿದ್ದಾರೆ. ಇವರು ತಮ್ಮ ಶಿಕ್ಷಣವನ್ನು ಮುಗಿಸುತ್ತಿದ್ದಂತೆ ಕರೋನ ಪ್ರಾರಂಭವಾದ ಕಾರಣ ಇವರ ತಂದೆ-ತಾಯಿ ಇವರನ್ನು ಹೊರಗೆ ಕೆಲಸಕ್ಕೆ ಕಳಿಸುವುದಕ್ಕೆ ಒಪ್ಪಲಿಲ್ಲ ಬದಲಾಗಿ ತಮಗಿರುವ ಏಳು ಎಕರೆ ಹೊಲದಲ್ಲಿ ಕೃಷಿ ಮಾಡುವಂತೆ ತಿಳಿಸುತ್ತಾರೆ. ಆಗ ಓಂಕಾರ್ ಅವರು ಅಕ್ಕಪಕ್ಕದ ರೈತರೊಡನೆ ಚರ್ಚಿಸಿ ಬಾಳೆ ಬೆಳೆಯುವುದಕ್ಕೆ ಮುಂದಾಗುತ್ತಾರೆ. ಇವರದು ಮೂಲತಹ ಕೃಷಿ ಕುಟುಂಬ ಆದರೆ ಓಂಕಾರ ಅವರಿಗೆ ಇದು ಹೊಸತು. ಈ ಕಾರ್ಯದಲ್ಲಿ ಇವರಿಗೆ ಸಲಹೆಯನ್ನು ನೀಡಿದವರು ಕೃಷಿ ಪದವೀಧರ ರವಿ ಕರಜಣಗಿ ಅವರು. ಅವರ ಸಲಹೆ ಮೇರೆಗೆ ಬೆಳೆಯನ್ನು ಕಾಲಕಾಲಕ್ಕೆ ನಿರ್ವಹಣೆ ಮಾಡಿಕೊಂಡು ಬಂದ ಇವರು ಮೊದಲ ವರ್ಷದಲ್ಲಿಯೇ ಉತ್ತಮ ರೀತಿಯಲ್ಲಿ ಬೆಳೆಯನ್ನು ಪಡೆಯುತ್ತಾರೆ.

ಇಲ್ಲಿ ಇವರು ಜಿ ನೈನ್ ತಳಿಯನ್ನು ಆಯ್ಕೆ ಮಾಡಿಕೊಂಡಿದ್ದು ಏಳು ಏಕರೆಯಲ್ಲಿ ಒಟ್ಟು ಒಂಬತ್ತು ಸಾವಿರ ಐದು ನೂರು ಸಸಿಗಳನ್ನು ನಾಟಿ ಮಾಡಿದ್ದಾರೆ. ಜಮೀನಿನಲ್ಲಿ ನೀರು ಶೇಕರಣೆಗಾಗಿ ಕೃಷಿ ಹೊಂಡವನ್ನು ನಿರ್ಮಾಣ ಮಾಡಿಕೊಂಡಿದ್ದಾರೆ. ಜೊತೆಗೆ ಹನಿ ನೀರಾವರಿ ವ್ಯವಸ್ಥೆಯನ್ನು ಮಾಡಿಕೊಂಡು ಅದರ ಮೂಲಕ ನೀರು ಮತ್ತು ಗೊಬ್ಬರವನ್ನು ಗಿಡಗಳಿಗೆ ಪೂರೈಸಲಾಗುತ್ತಿದೆ. ಹೆಚ್ಚಿನ ಪ್ರಮಾಣದಲ್ಲಿ ಸಾವಯವ ಗೊಬ್ಬರವನ್ನೇ ಬಳಕೆ ಮಾಡುತ್ತಿದ್ದು ಇದು ಉತ್ತಮ ಬೆಳೆಯನ್ನು ತೆಗೆಯುವುದಕ್ಕೆ ಸಹಾಯವಾಗಿದೆ.

ಇವರು ಬೆಳೆದಿರುವ ಬೆಳೆ ವಿದೇಶಕ್ಕೆ ಹೋಗೋದಕ್ಕೆ ಅಣಿಯಾಗಿದೆ. ಕಳೆದ ಸೆಪ್ಟೆಂಬರ್ನಲ್ಲಿ ನಾಟಿ ಮಾಡಿದಂತಹ ಬೆಳೆ ಈಗ ಕಟಾವಿನ ಹಂತವನ್ನು ತಲುಪಿದೆ ಪ್ರತಿ ಕೊನೆ ಮೂವತ್ತರಿಂದ ಮೂವತ್ತೈದು ಕೆಜಿ ತೂಕವಿದ್ದು ಅಂದಾಜು ಎರಡು ನೂರಾ ಇಪ್ಪತ್ತರಿಂದ ಎರಡು ನೂರಾ ಎಂಬತ್ತು ಟನ್ ಇಳುವರಿ ಬರುವ ನಿರೀಕ್ಷೆ ಇದೆ. ರಪ್ತು ಗುಣಮಟ್ಟದ ಬಾಳೆ ಆಗಿರುವುದರಿಂದ ಖರೀದಿ ಮಾಡುವ ಕಂಪನಿಗಳು ಕೆಜಿಗೆ ಹನ್ನೊಂದು ರೂಪಾಯಿ ನಿಗದಿ ಮಾಡಿವೆ. ಅಂದರೆ ಖರ್ಚು ತೆಗೆದು ಎಕರೆಗೆ ಮೂರು ಲಕ್ಷ ರೂಪಾಯಿ ನಿವ್ವಳ ಲಾಭ ಬರುವ ಸಾಧ್ಯತೆ ಇದೆ. ಎತ್ತಣ ಮಾಮರ ಎತ್ತಣ ಕೋಗಿಲೆ ಎನ್ನುವಂತೆ ಓಂಕಾರ್ ಅವರು ಓದಿರುವುದು ಎಂಜಿನಿಯರಿಂಗ್ ಅನಿವಾರ್ಯ ಕಾರಣದಿಂದ ಕೃಷಿ ಕ್ಷೇತ್ರಕ್ಕೆ ಬರಬೇಕಾದ ಪರಿಸ್ಥಿತಿ ಎದುರಾಯಿತು.

ಕೃಷಿಯಲ್ಲಿ ಶ್ರಮ ಶ್ರದ್ಧೆಯನ್ನು ತೋರಿದ ಓಂಕಾರ್ ಅವರು ತಮ್ಮ ಮೊದಲ ಪ್ರಯತ್ನದಲ್ಲಿ ಯಶಸ್ಸನ್ನು ಸಾಧಿಸಿದ್ದಾರೆ. ಇದು ಕೇವಲ ತಂದೆತಾಯಿಗಳಿಗೆ ಮಾತ್ರವಲ್ಲ ಅಕ್ಕಪಕ್ಕದ ರೈತರಿಗು ಖುಷಿಯ ವಿಷಯವಾಗಿದೆ. ಕೃಷಿಯಲ್ಲಿ ಸಾಕಷ್ಟು ಬೆವರು ಹರಿಸಿದವರಿದ್ದಾರೆ ಉತ್ತಮ ಇಳುವರಿ ಬಂದರೂ ಸರಿಯಾದ ಬೆಲೆ ಸಿಗದೆ ಹಾನಿಯನ್ನು ಅನುಭವಿಸಿದವರು ಇದ್ದಾರೆ. ಅದೇ ರೀತಿ ಓಂಕಾರ್ ಅವರಿಗೂ ಪ್ರಾರಂಭದಲ್ಲಿ ಆತಂಕ ಇತ್ತು ಆದರೆ ಅವುಗಳನ್ನು ಮೆಟ್ಟಿನಿಂತು ಸಮಸ್ಯೆಗಳಿಗೆ ಪರಿಹಾರವನ್ನು ಹುಡುಕುತ್ತಾ ಬಾಳೆ ಕೃಷಿಯಲ್ಲಿ ಯಶಸ್ಸನ್ನು ಕಂಡಿದ್ದಾರೆ.

ಬೆಳೆದಂತಹ ಎಲ್ಲಾ ಬೆಳೆಗಳನ್ನು ವಿದೇಶಕ್ಕೆ ರಫ್ತು ಮಾಡುವುದಕ್ಕೆ ಸಾಧ್ಯವಿಲ್ಲ ಅದಕ್ಕೆ ಅದರದೇ ಆದಂತಹ ನಿಯಮಗಳಿವೆ. ಬಾಳೆಕಾಯಿ ಒಂಬತ್ತು ಇಂಚು ಉದ್ದವಿರಬೇಕು ಮಿನಿಮಮ್ ಅಳತೆಯಲ್ಲಿ ಇರಬೇಕು. ಕ್ವಾಲಿಟಿಯನ್ನೂ ಪರೀಕ್ಷೆ ಮಾಡಿದ ನಂತರ ಅದನ್ನು ಬೇರೆ ದೇಶಕ್ಕೆ ರಪ್ತು ಮಾಡಬೇಕೇ ಬೇಡವೇ ಎಂಬುದು ತಿಳಿಯುತ್ತದೆ. ಓಂಕಾರ ಅವರ ತೋಟ ಈಗಾಗಲೇ ಎಲ್ಲ ರೀತಿಯ ಪರೀಕ್ಷೆಗಳನ್ನು ಮುಗಿಸಿ ವಿದೇಶಕ್ಕೆ ಬಾಳೆಯನ್ನು ರಫ್ತು ಮಾಡುವುದಕ್ಕೆ ಆಯ್ಕೆಯಾಗಿದೆ.

ಇನ್ನು ಇವರ ಬಾಳೆ ತೋಟ ಆಕರ್ಷಣೀಯವಾಗಿದೆ ಸುತ್ತಲಿನ ಹತ್ತಾರು ಹಳ್ಳಿಯ ರೈತರು ಇವರ ತೋಟಕ್ಕೆ ಭೇಟಿ ನೀಡಿ ಮಾಹಿತಿಯನ್ನು ಪಡೆಯುತ್ತಿದ್ದಾರೆ. ಒಟ್ಟಾರೆಯಾಗಿ ಸಿವಿಲ್ ಇಂಜಿನಿಯರಿಂಗ್ ಮುಗಿಸಿರುವ ಓಂಕಾರ ಕೃಷಿಯಲ್ಲಿ ಉತ್ತಮವಾದ ಸಾಧನೆಯನ್ನು ಮಾಡಿದ್ದಾರೆ ಅಧಿಕ ಆದಾಯ ಗಳಿಸುವ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ ಇವರು ಕೃಷಿಯಲ್ಲಿ ಇನ್ನೂ ಹೆಚ್ಚಿನ ಸಾಧನೆಯನ್ನು ಮಾಡಿ ಇಂದಿನ ಯುವ ರೈತರಿಗೆ ಆದರ್ಶವಾಗಲಿ ಎಂದು ನಾವು ಹಾರೈಸೋಣ.

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: