ಆರೋಗ್ಯವೆ ಭಾಗ್ಯ ಆರೋಗ್ಯದಿಂದ ಜೀವನದಲ್ಲಿ ಏನಾದರೂ ಸಾಧಿಸಬಹುದು. ಈಗಿನ ಕಲುಷಿತ ಆಹಾರ, ಗಾಳಿ, ಜೀವನಶೈಲಿ ಮುಂತಾದ ಕಾರಣಗಳಿಂದ ಆರೋಗ್ಯ ಸಮಸ್ಯೆ ಹೆಚ್ಚಾಗಿದೆ. ನಮ್ಮ ಸುತ್ತಲಿನ ಮರಗಳಿಂದ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಅರಳಿ ಮರದ ಔಷಧೀಯ ಗುಣಗಳ ಬಗ್ಗೆ ಈ ಲೇಖನದಲ್ಲಿ ನೋಡೋಣ.
ಅರಳಿ ಮರಕ್ಕೆ ಅಶ್ವತ್ಥ ಮರ ಎಂತಲೂ ಕರೆಯುತ್ತಾರೆ. ಈ ಮರವನ್ನು ಭಾರತೀಯರು ಪವಿತ್ರ ಮರವೆಂದು ಪರಿಗಣಿಸಿ ಪೂಜಿಸಲಾಗುತ್ತದೆ. ಅರಳಿ ಮರದಿಂದ ಅನೇಕ ಉಪಯೋಗಗಳಿವೆ ಅನೇಕ ರೋಗಗಳು ವಾಸಿಯಾಗುತ್ತದೆ ಅಲ್ಲದೆ ಅರಳಿ ಮರದ ಗಾಳಿಯನ್ನು ತೆಗೆದುಕೊಂಡರೆ ಆರೋಗ್ಯವು ಚೆನ್ನಾಗಿರುತ್ತದೆ ಯಾವುದೆ ರೀತಿಯ ಖಾಯಿಲೆ ಬರುವುದಿಲ್ಲ. ಹಿಂದಿನ ಕಾಲದಲ್ಲಿ ಅರಳಿ ಮರ ಅಥವಾ ಎಲೆಯ ಮೂಲಕ ರೋಗಗಳನ್ನು ಗುಣಪಡಿಸಿಕೊಳ್ಳುತ್ತಿದ್ದರು.
ಈಗಿನ ದಿನಗಳಲ್ಲಿ ಅರಳಿ ಮರದ ಮಹತ್ವದ ಬಗ್ಗೆ ತಿಳಿಯದ ಜನರು ಮರಗಳನ್ನು ಕಡಿದು ನಾಶ ಮಾಡುತ್ತಿದ್ದಾರೆ. ಹಿಂದಿನ ಕಾಲದಲ್ಲಿ ಅರಳಿ ಮರವನ್ನು ಕಡಿಯುವುದಿರಲಿ ಅದಕ್ಕೆ ಏನು ಮಾಡಲು ಬಿಡುತ್ತಿರಲಿಲ್ಲ ದೇವರೆಂದು ಪೂಜಿಸುತ್ತಿದ್ದರು. ಅರಳಿ ಮರದಲ್ಲಿ ಬ್ರಹ್ಮ, ವಿಷ್ಣು, ಮಹೇಶ್ವರ ಹಾಗೂ ಅರಳಿ ಮರದ ಎಲೆಗಳಲ್ಲಿ ಮುಕ್ಕೋಟಿ ದೇವತೆಗಳು ಇರುತ್ತಾರೆ ಎಂದು ನಂಬಲಾಗಿದೆ. ಹೀಗಾಗಿ ಜನರು ಸಾಮಾನ್ಯವಾಗಿ ಅರಳಿಮರವನ್ನು ಪೂಜಿಸುತ್ತಾರೆ ಮತ್ತು ದೇವಸ್ಥಾನಗಳಲ್ಲಿ ಇರುವ ಅರಳಿ ಮರವನ್ನು ಪ್ರದಕ್ಷಿಣೆ ಹಾಕುತ್ತಾರೆ. ಅರಳಿ ಮರದ ಕಾಂಡ, ರೆಂಬೆ, ಎಲೆಗಳನ್ನು ಔಷಧಿಗಾಗಿ ಬಳಸುತ್ತಾರೆ. ಈ ಮರವನ್ನು ಅಸ್ತಮಾ ಸೇರಿದಂತೆ ಉಸಿರಾಟದ ಸಮಸ್ಯೆಗೆ ಬಳಕೆ ಮಾಡುತ್ತಾರೆ.
ಅರಳಿ ಮರದ ತೊಗಟೆಯನ್ನು ತೆಗೆದು ಒಣಗಿಸಿ ನಂತರ ಪುಡಿ ಮಾಡಿ ನೀರಿನೊಂದಿಗೆ ಔಷಧಿಯಾಗಿ ತೆಗೆದುಕೊಳ್ಳುವುದರಿಂದ ಉಸಿರಾಟದ ಸಮಸ್ಯೆ ನಿವಾರಣೆಯಾಗುತ್ತದೆ. ಅರಳಿ ಮರದ ಎಲೆಯನ್ನು ಹಾಲಿನಲ್ಲಿ ಅಥವಾ ನೀರಿನಲ್ಲಿ ಹಾಕಿ ಕುದಿಸಿ ಕುಡಿಯುವುದರಿಂದ ಅಸ್ತಮಾ ಸಮಸ್ಯೆ ನಿವಾರಣೆಯಾಗುತ್ತದೆ. ಚರ್ಮದ ಸಮಸ್ಯೆ, ತುರಿಕೆ ಇದ್ದರೆ ಅರಳಿ ಮರದ ತೊಗಟೆ ಬಹಳ ಉಪಯೋಗಕಾರಿ. ಅರಳಿ ಮರದ ತೊಗಟೆಯನ್ನು ಪುಡಿ ಮಾಡಿ ತುರಿಕೆ ಇರುವ ಜಾಗಕ್ಕೆ ಹಚ್ಚುವುದರಿಂದ ಸಮಸ್ಯೆ ಬೇಗನೆ ನಿವಾರಣೆಯಾಗುತ್ತದೆ. ಗಾಯಗಳಿಗೆ ಅರಳಿ ಮರದ ಎಲೆಯ ಪೇಸ್ಟ್ ಮಾಡಿ ಹಚ್ಚುವುದರಿಂದ ಗಾಯ ಬೇಗನೆ ವಾಸಿಯಾಗುತ್ತದೆ. ಅರಳಿ ಮರದ ತೊಗಟೆಯನ್ನು ರಾತ್ರಿ ಮಲಗುವಾಗ ಒಂದು ಲೋಟ ನೀರಿನಲ್ಲಿ ನೆನೆಸಿ ಬೆಳಗ್ಗೆ ಎದ್ದ ತಕ್ಷಣ ಆ ನೀರನ್ನು ಕುಡಿಯುವುದರಿಂದ ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳು ನಿವಾರಣೆಯಾಗುತ್ತದೆ.
ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಜಂಕ್ ಫುಡ್, ಫಾಸ್ಟ್ ಫುಡ್ ಸೇವಿಸುವುದರಿಂದ ಮಲಬದ್ಧತೆ, ಗ್ಯಾಸ್ ಸಮಸ್ಯೆ ಸಾಮಾನ್ಯವಾಗಿ ಕಂಡುಬರುತ್ತದೆ. ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಅರಳಿ ಮರದ ಎಲೆಯ ರಸವನ್ನು ಕುಡಿಯುವುದರಿಂದ ಮಲಬದ್ಧತೆ, ಗ್ಯಾಸ್, ಪಿತ್ತ ಇನ್ನೂ ಅನೇಕ ಸಮಸ್ಯೆ ನಿವಾರಣೆಯಾಗುತ್ತದೆ. ಅರಳಿ ಮರದ ಎಲೆಯನ್ನು ಮುರಿದಾಗ ಒಂದು ರೀತಿಯ ಹಾಲಿನಂತಿರುವ ರಸ ಬರುತ್ತದೆ ಅದನ್ನು ಕಾಲಿನ ಹಿಂಬದಿ ಒಡೆದ ಜಾಗಕ್ಕೆ ಹಚ್ಚಬೇಕು ಇದರಿಂದ ಒಡೆದ ಜಾಗ ಸರಿಯಾಗುತ್ತದೆ. ಉರಿಮೂತ್ರ ಮತ್ತು ಇನ್ನಿತರ ಮೂತ್ರ ಸಮಸ್ಯೆಗೆ ಅರಳಿ ಮರದ ತೊಗಟೆಯ ಕಷಾಯ ಮಾಡಿ ಅದಕ್ಕೆ ಒಂದು ಚಮಚ ಜೇನುತುಪ್ಪ ಸೇರಿಸಿ ಕುಡಿಯುವುದರಿಂದ ಉರಿಮೂತ್ರ ಸಮಸ್ಯೆ ನಿವಾರಣೆಯಾಗುತ್ತದೆ. ಅರಳಿ ಮರದಿಂದ ಅನೇಕ ಪ್ರಯೋಜನಗಳಿವೆ ಆದರೆ ಅರಳಿ ಮರದ ಔಷಧಿ ಮಾಡುವ ಮೊದಲು ವೈದ್ಯರ ಸಲಹೆಯನ್ನು ಪಡೆದುಕೊಳ್ಳುವುದು ಉತ್ತಮ. ಈ ಮಾಹಿತಿ ಆರೋಗ್ಯ ಹೆಚ್ಚಿಸುವ ಮಾಹಿತಿಯಾಗಿದ್ದು ಎಲ್ಲರಿಗೂ ತಿಳಿಸಿ.