ಎರಡನೆ ಅಲೆ, ರೂಪಾಂತರಿ ಕೊರೋನವೈರಸ್ ಮತ್ತೆ ನಮ್ಮನ್ನು ಕಾಡುತ್ತಿದೆ. ಆಕ್ಸಿಜನ್ ಕೊರತೆಯಿಂದ ಜನರು ನರಳಿ ನರಳಿ ಸಾಯುತ್ತಿರುವ ದೃಶ್ಯವನ್ನು ಪ್ರತಿದಿನ ನೋಡುತ್ತಿದ್ದೇವೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಮಹಾರಾಷ್ಟ್ರದಲ್ಲಿ ದೇವರಂತೆ ಒಬ್ಬರು ಆಕ್ಸಿಜನ್ ಪೂರೈಕೆ ಮಾಡುತ್ತಿದ್ದಾರೆ. ಹಾಗಾದರೆ ಅವರು ಯಾರು, ಅವರು ಮಾಡಿದ ಕೆಲಸದ ಬಗ್ಗೆ ಈ ಲೇಖನದಲ್ಲಿ ನೋಡೋಣ.
ಕೊರೋನ ವೈರಸ್ ಎರಡನೆ ಬಾರಿ ನಮ್ಮ ದೇಶಕ್ಕೆ ಕಂಟಕವಾಗಿ ಕಾಡುತ್ತಿದೆ, ದೇಶದಲ್ಲಿ ಕೊರೋನ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಲೆ ಹೋಗುತ್ತಿರುವುದರಿಂದ ಜನರಲ್ಲಿ ಆತಂಕ ಮನೆಮಾಡಿದೆ. ದಿನೆ ದಿನೆ ಕೇಸುಗಳು ಏರುತ್ತಲೆ ಹೋಗಿದ್ದು ಪರಿಸ್ಥಿತಿ ನಿಯಂತ್ರಣಕ್ಕೆ ಸಿಗುತ್ತಿಲ್ಲ. ಒಂದು ಕಡೆ ಕೇಸುಗಳ ಸಂಖ್ಯೆ ಹೆಚ್ಚುತ್ತಿದ್ದರೆ ಮತ್ತೊಂದು ಕಡೆ ಆಸ್ಪತ್ರೆಗಳು ಭರ್ತಿಯಾಗಿ ಬೆಡ್ ಗಳಿಗಾಗಿ ರೋಗಿಗಳು ಕಾಯುತ್ತಿದ್ದಾರೆ. ಇತ್ತೀಚೆಗೆ ಕೊರೋನ ಸೋಂಕು ತಗುಲಿ ಸತ್ತವರಿಗಿಂತ ಚಿಕಿತ್ಸೆ ಸಿಗದೆ ನರಳಿ, ನರಳಿ ಸತ್ತವರು ಹೆಚ್ಚು. ಇದೀಗ ಆಕ್ಸಿಜನ್ ಎಲ್ಲರ ಜೀವ ಉಳಿಸುವ ದೊಡ್ಡ ಶಕ್ತಿಯಾಗಿದೆ. ಜನ ಆಕ್ಸಿಜನ್ ಕೊರತೆಯಿಂದ ಪ್ರಾಣ ಬಿಡುತ್ತಿರುವ ದೃಶ್ಯಗಳು ಸರ್ವೆಸಾಮಾನ್ಯ. ಇವೆಲ್ಲದರ ನಡುವೆ ಕೆಲವು ವ್ಯಕ್ತಿಗಳು ದೇವರಂತೆ ಬಂದು ಸಹಾಯ ಮಾಡುವುದನ್ನು ನೋಡಬಹುದು.
ಕೊರೋನ ಪ್ರಕರಣ ವಿಪರೀತವಾಗಿರುವ ಮಹಾರಾಷ್ಟ್ರದಲ್ಲಿ ಶಹನವಜ್ ಶೇಖ್ ಎಂಬುವವನು ಕಳೆದ ವರ್ಷದ ಕೊರೋನ ಸಮಯದಿಂದಲೂ ದೇವರಂತೆ ಆಕ್ಸಿಜನ್ ಪೂರೈಸಿ ಎಷ್ಟೊ ಜನರ ಜೀವ ಉಳಿಸಿದ್ದಾರೆ. ಈ ವರ್ಷದ ವಿಶೇಷವೆಂದರೆ ಅವರೊಂದಿಗೆ ಇನ್ನು ಅನೇಕ ಜನ ಸ್ನೇಹಿತರು ಕೈಜೋಡಿಸಿದ್ದು ಅವರು ತಮ್ಮದೆ ಸ್ವಂತ ಹೆಲ್ಪ್ ಲೈನ್ ಅನ್ನು ಮಾಡಿಕೊಂಡಿದ್ದಾರೆ. ವಿಪರೀತವಾಗಿ ಬೇಡಿಕೆಯಲ್ಲಿದ್ದ ಆಕ್ಸಿಜನ್ ಪೂರೈಕೆಗಾಗಿ ಶೇಖ್ ಅವರು ತಮ್ಮ 22 ಲಕ್ಷ ರೂಪಾಯಿ ಬೆಲೆಬಾಳುವ ಕಾರನ್ನು ಮಾರಿ ಅದರಿಂದ 160 ಜನರಿಗೆ ಆಕ್ಸಿಜನ್ ವ್ಯವಸ್ಥೆ ಮಾಡಿ ಮಾನವೀಯತೆ ಮೆರೆದಿದ್ದಾರೆ. ನಾವಾಯಿತು ನಮ್ಮ ಪಾಡಾಯಿತು ಎಂದು ಅಂದುಕೊಂಡಿರುವ ಜನರ ಮಧ್ಯೆ ಶೇಖ್ ಅವರು ತಮ್ಮ ಪ್ರೀತಿಯ ಕಾರನ್ನು ಮಾರಿ ಜನರಿಗೆ ನೆರವಾಗುತ್ತಿದ್ದಾರೆ, ಹೀಗಾಗಿ ಅವರನ್ನು ದೇವರೆಂದು ಕರೆದರೆ ತಪ್ಪಿಲ್ಲ, ಇಲ್ಲಿಯವರೆಗೆ ಬರೋಬ್ಬರಿ 4000 ಜನರ ಜೀವ ಉಳಿಸಲು ನೆರವಾದ ಶೇಖ್ ಅವರನ್ನು ಅಲ್ಲಿನ ಜನ ಆಕ್ಸಿಜನ್ ಮ್ಯಾನ್ ಎಂದೆ ಕರೆಯುತ್ತಾರೆ. ದೇವರ ರೂಪದಲ್ಲಿ ಬಂದು ಸಹಾಯ ಮಾಡಿದ ಶೇಖ್ ಅವರಿಂದ ಸಹಾಯ ಪಡೆದ ಜನ ಇವರೆ ನಮ್ಮ ಪಾಲಿನ ನಿಜವಾದ ದೇವರು ಎಂದು ಅವರಿಗೆ ನಮಸ್ಕರಿಸಿದ್ದಾರೆ. ಒಬ್ಬ ಮಾನವನಾಗಿ ಕಷ್ಟದಲ್ಲಿರುವವರಿಗೆ ಸಹಾಯ ಮಾಡಬೇಕೆಂದು ಜನರಿಗೆ ತಿಳಿಸಿಕೊಟ್ಟ ಶೇಖ್ ಅವರ ಕೆಲಸ ಶ್ಲಾಘನೀಯವಾಗಿದೆ. ಶೇಖ ಅವರಿಗೆ ದೇವರು ಆಯಸ್ಸು, ಆರೋಗ್ಯ, ಇನ್ನಷ್ಟು ಸಹಾಯ ಮಾಡುವ ಶಕ್ತಿಯನ್ನು ಕೊಡಲಿ ಎಂದು ಆಶಿಸೋಣ