WhatsApp Group Join Now
Telegram Group Join Now

ಸಂತೋಷ್‌ ಆನಂದರಾಮ್‌ ನಿರ್ದೇಶನದ ಸಿನಿಮಾಗಳಲ್ಲಿ ಈ ಕಾಲದ ಪ್ರೇಕ್ಷಕರಿಗೆ ಬೇಕಾದ ಮನರಂಜನೆಯ ಅಂಶಗಳ ಜೊತೆಗೇ ಹೇಳಲೇಬೇಕಾದ ಮಾತನ್ನು ಗಟ್ಟಿಯಾಗಿ ಹೇಳುವ ಕತೆಯೂ ಇರುತ್ತದೆ. ಕಾಲ್ಪನಿಕ ಕತೆ ಹೇಳುವಾಗಲೂ ಅವರು ತನ್ನ ವರ್ತಮಾನದ ಜಗತ್ತನ್ನು ಮರೆಯುವುದಿಲ್ಲ. ಅವರ ಹಿಂದಿನ ಎರಡೂ ಸಿನಿಮಾಗಳ ಹಾಗೆ, ಯುವರತ್ನ ಕೂಡ ಈ ಕಾಲದ ಬಹುದೊಡ್ಡ ಸಮಸ್ಯೆಯನ್ನು ಕೈಗೆತ್ತಿಕೊಂಡಿದೆ. ಅದರ ಎಲ್ಲ ಮುಖಗಳನ್ನೂ ಅನಾವರಣ ಮಾಡುತ್ತಾ ಹೋಗುತ್ತದೆ.

ಒಂದೆಡೆ ಮುಚ್ಚುತ್ತಿರುವ ಸರ್ಕಾರಿ ಕಾಲೇಜುಗಳು, ಇನ್ನೊಂದೆಡೆ ಅವನ್ನು ಮುಚ್ಚಿಸಲಿಕ್ಕೆಂದೇ ಶತಪ್ರಯತ್ನ ಮಾಡುತ್ತಿರುವ ಖಾಸಗಿ ವಿದ್ಯಾವ್ಯಾಪಾರಿಗಳು; ಇವರ ನಡುವಿನ ಹೋರಾಟವನ್ನು ಯುವರತ್ನ ನಮ್ಮ ಮುಂದಿಡುತ್ತದೆ. ಕಾಲೇಜಿನ ವಿದ್ಯಾರ್ಥಿಗಳನ್ನು ದಾರಿತಪ್ಪಿಸುವುದರಿಂದ ಹಿಡಿದು, ಸರಿಯಾಗಿ ಸಾಗುತ್ತಿರುವ ಕಾಲೇಜುಗಳನ್ನು ಸರ್ವನಾಶ ಮಾಡುವ ತನಕ ಹಲವು ಹುನ್ನಾರಗಳನ್ನು ಶಿಕ್ಷಣ ಸಚಿವರಿಂದ ಹಿಡಿದು ಅಧಿಕಾರದ ಎಲ್ಲ ಹಂತದಲ್ಲೂ ಇರುವವರು ಮಾಡುತ್ತಿರುವುದನ್ನು ಸಿನಿಮಾ ತೋರಿಸುತ್ತದೆ. ವಿದ್ಯಾರ್ಥಿಗಳಿಗೆ ಒಳ್ಳೆಯ ಪಾಠ ಬೇಕಾಗಿಲ್ಲ. ಅವರಿಗೆ ಬೇಕಾಗಿರುವುದು ಸುಂದರವಾದ ಕಾಲೇಜು, ಸಂಭ್ರಮ, ಸಂಗೀತ ಮತ್ತು ಗಮ್ಮತ್ತು ಅನ್ನುತ್ತಲೇ ಅದನ್ನು ಕೊಡಲಿಕ್ಕೆ ನಿಂತಿರುವ ಶಿಕ್ಷಣ ವ್ಯಾಪಾರಿ ಮತ್ತು ಮುರಿದ ಬೆಂಚಿನಲ್ಲಿ ಕುಳಿತ ವಿದ್ಯಾರ್ಥಿ ಒಳ್ಳೆಯ ಪಾಠ ಕಲಿಯುವುದಿಲ್ಲ ಅಂತೇನಿಲ್ಲ ಎಂದು ನಂಬಿರುವ ಪ್ರಿನ್ಸಿಪಾಲರ ನಡುವಿನ ಹೋರಾಟ ಇದು.ಇಂಥ ಕಥಾವಸ್ತುವನ್ನು ನಿಭಾಯಿಸುವುದಕ್ಕೆ ಪುನೀತ್‌ಗಿಂತ ಅತ್ಯುತ್ತಮ ಆಯ್ಕೆ ಮತ್ತೊಂದಿರಲಿಕ್ಕೆ ಸಾಧ್ಯವಿಲ್ಲ ಎಂಬಂತೆ ಅವರು ಇಡೀ ಚಿತ್ರವನ್ನು ಮುಂದಕ್ಕೆ ಒಯ್ಯುತ್ತಾ ಹೋಗುತ್ತಾರೆ. ಆಗಷ್ಟೇ ಕಾಲೇಜು ಸೇರಿದ ವಿದ್ಯಾರ್ಥಿಯ ತೆಳು ಮೈಕಟ್ಟು, ಹನ್ನೆರಡು ವರುಷಗಳ ನಂತರದ ರೂಪುರೇಷೆ ಎರ‚ಡೂ ಅವರಿಗೆ ಒಪ್ಪುತ್ತದೆ. ಕಾಲೇಜು ಹುಡುಗನ ಲವಲವಿಕೆ, ತುಂಟತನ ಕೂಡ ಚಿತ್ರದ ವೇಗ ಹೆಚ್ಚಿಸಿದೆ.

ಸಂತೋಷ್‌ ಆನಂದ್‌ರಾಮ್‌ ಒಂದು ದೊಡ್ಡ ಕತೆಯನ್ನು ಸಣ್ಣ ಸಣ್ಣ ಪಾತ್ರಗಳ ಮೂಲಕ ಕಟ್ಟುತ್ತಾ ಹೋಗುತ್ತಾರೆ. ಕಾಲೇಜಿನಲ್ಲಿ ಬೆಲ್‌ ಹೊಡೆಯುವ ಪ್ಯೂನ್‌, ಒಬ್ಬ ಆಟೋ ಡ್ರೈವರ್‌, ಟೈಲರ್‌, ಸಿಡುಕುವ ವಿದ್ಯಾರ್ಥಿ- ಇವರ ಮೂಲಕ ಕತೆ ಕಟ್ಟುವುದು ಅವರ ಶೈಲಿ. ಅದರಲ್ಲಿ ಅವರು ಗೆಲ್ಲುತ್ತಾರೆ ಕೂಡ. ಹಾಗೆಯೇ, ಹೆತ್ತವರು ಮತ್ತು ಮಕ್ಕಳ ನಡುವಿನ ಸಂಬಂಧವನ್ನು ಬೆಸೆಯುವ ಸನ್ನಿವೇಶಗಳು ಅವರಿಗೆ ಇಷ್ಟ. ಯುವರತ್ನ ಚಿತ್ರವನ್ನು ಅನನ್ಯವಾಗಿಸಿರುವುದು ಇಂಥ ಸನ್ನಿವೇಶಗಳು. ಕತೆಯ ಬೆಳವಣಿಗೆಯಲ್ಲಿ ಬಂದು ಹೋಗುವ ಇಂಥ ಪುಟ್ಟಪುಟ್ಟದೃಶ್ಯಗಳಲ್ಲೇ ಯುವರಾಜನ ಪಾತ್ರ ಹುರಿಗೊಳ್ಳುತ್ತಾ ಹೋಗುತ್ತದೆ. ಈ ಮೂವಿಯಲ್ಲಿರುವ ಪಾತ್ರಗಳ ವಿಭಿನ್ನತೆ ಸನ್ನಿವೇಶಗಳ ವೈಶಿಷ್ಟ್ಯತೆಯನ್ನು ಕುರಿತು ತೆಲುಗು ಚಿತ್ರರಂಗದ ಖ್ಯಾತ ನಟ ಮಹೇಶ್ ಬಾಬು ತಮ್ಮ ಮೆಚ್ಚುಗೆಯನ್ನು ಸೂಚಿಸಿ ನಾನು ಸಹ ನನ್ನ ಕುಟುಂಬದ ಜೊತೆಗೂಡಿ ಪುನೀತ್ ಅವರ ಯುವರತ್ನ ಮೂವಿ ನೋಡುವೆ ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: