ಇಂದು ಗೂಗಲ್ ಪೇ, ಫೋನ್ ಪೇ, ಪೇಟಿಎಂ ಮುಂತಾದ ಆಪ್ ಗಳನ್ನು ಬಳಸದೇ ಇರುವವರೇ ಇಲ್ಲ ಎನ್ನಬಹುದು. ವ್ಯಾಪಾರಸ್ಥರಾದರಂತೂ ಅವರಿಗೆ ಈ ಆಪ್ಗಳನ್ನು ಬಳಸುವುದು ಅನಿವಾರ್ಯ. ಆದರೆ ಇಲ್ಲಿ ಮೋಸಕ್ಕಂತೂ ತುಂಬಾ ಸ್ಕೋಪ್ ಇದೆ. ಗೂಗಲ್ ಪೇ ಅಥವಾ ಫೋನ್ ಪೇ ಐಡಿ ಮತ್ತು ಪಾಸ್ವರ್ಡ್ ಪಡೆದು ವಂಚಿಸುವುದು ಸಾಮಾನ್ಯ. ಇದು ಇನ್ನೊಂದು ಬಗೆಯ ಮೋಸ. ಇದು ಮೈಸೂರಿನಲ್ಲಿ ನಡೆದ ಘಟನೆ. ಇದರ ಕುರಿತಾಗಿ ಹೆಚ್ಚಿನ ಮಾಹಿತಿಯನ್ನು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.
ಗ್ರಾಹಕರ ಸೋಗಿನಲ್ಲಿ ಬಂದ ಐವರು ಆನ್ಲೈನ್ ಪೇಮೆಂಟ್ ಹೆಸರಿನಲ್ಲಿ ಉದ್ಯಮಿಗೆ ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ. ಮೈಸೂರಿನ ಸರಸ್ವತಿಪುರಂನ ಒಂದು ಜವಳಿ ಅಂಗಡಿಗೆ ಡಿಸೆಂಬರ್ 13ರಂದು ಐವರು ಯುವಕರು ಐಷಾರಾಮಿ ಕಾರಿನಲ್ಲಿ ಬಂದಿದ್ದಾರೆ. ಒಂದು ಗಂಟೆಯಲ್ಲಿ ಬರೋಬ್ಬರಿ 16,000 ರೂಪಾಯಿ ಮೌಲ್ಯದ ಜವಳಿಯನ್ನು ಖರೀದಿ ಮಾಡಿದ್ದಾರೆ. ಮೈಸೂರಿನ ಜಯಶಂಕರ್ ಎನ್ನುವವರ ಅಂಗಡಿಗೆ ಬಂದ ಐವರು 16 ಸಾವಿರ ರೂಪಾಯಿ ಬಟ್ಟೆ ಖರೀದಿಸಿ ಆನ್ಲೈನ್ ಪೇಮೆಂಟ್ ಮಾಡಿದ್ದು, ಯಾವುದೋ ಸರ್ವರ್ನಿಂದ ಕ್ರೆಡಿಟ್ ಮೆಸೇಜ್ ಬರುವಂತೆ ಮಾಡಿದ್ದಾರೆ. ಬಳಿಕ ಖಾತೆ ಚೆಕ್ ಮಾಡಿದಾಗ ಯಾವುದೇ ಹಣ ಕ್ರೆಡಿಟ್ ಆಗಿಲ್ಲ ಎನ್ನುವುದು ತಿಳಿದುಬಂದಿದೆ.
ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಸುನಿಲ್ ಎಂಬವರ ನಂಬರ್ ಪಡೆದುಕೊಂಡು ಯಾರಿಗೋ ಫಾರ್ವರ್ಡ್ ಮಾಡಿದ್ದಾರೆ. ನಾನು ಕೊಟ್ಟಿರುವ ಫೋನ್ ನಂಬರ್ಗೆ 16,000 ರೂ. ದುಡ್ಡು ಹಾಕು ಎಂದು ಹೇಳಿದ್ದಾರೆ. ಬಟ್ಟೆ ಅಂಗಡಿಯ ಸುನಿಲ್ಗೆ ಹಣ ಕ್ರೆಡಿಟ್ ಆಗಿದೆ ಎಂಬ ಮೆಸೇಜ್ ಬಂದಿದೆ. ಪೇಮೆಂಟ್ ಆಗುತ್ತಿದ್ದಂತೆಯೇ ಬಟ್ಟೆ ತೆಗೆದುಕೊಂಡು ಐವರೂ ಕಾರು ಹತ್ತಿ ಪರಾರಿಯಾಗಿದ್ದಾರೆ. ಆದರೆ ಡಿಜಿಟಲ್ ಟ್ರಾನ್ಸಾಕ್ಷನ್ಗೆ ಸಂಬಂಧಿಸಿ ಮೆಸೇಜ್ ಮಾತ್ರ ಬಂದಿದೆ; ಹಣ ಬಂದಿಲ್ಲ. ಬ್ಯಾಂಕ್ ಅಕೌಂಟ್ ಚೆಕ್ ಮಾಡಿದಾಗ ಮೋಸ ಹೋಗಿರುವುದು ಗೊತ್ತಾಗಿದೆ. ಪೊಲೀಸ್ ದೂರು ನೀಡಲಾಗಿದ್ದು, ಸಿಸಿಟಿವಿ ಫೂಟೇಜ್ನಿಂದ ಆರೋಪಿಗಳನ್ನು ಖಚಿತಪಡಿಸಿಕೊಳ್ಳಲಾಗಿದೆ.
ಸೈಬರ್ ಕ್ರೈಂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ಮೋಸ ನಡೆದುದು ಹೇಗೆ? ಡಿಜಿಟಲ್ ಪೇಮೆಂಟ್ ಆಪ್ಗಳನ್ನೇ ಹೋಲುವ ಇತರ ಕೆಲವು ನಕಲಿ ಆಪ್ಗಳು ಇತ್ತೀಚೆಗೆ ಕಾಣಿಸಿಕೊಂಡಿವೆ. ಇವುಗಳ ಮೂಲಕ ಮೋಸ ಮಾಡಿರುವ ಸಾಧ್ಯತೆ ಇದೆ. ಇದು ನಿಮಗೆ ಹಣ ಕ್ರೆಡಿಟ್ ಆಗಿದೆ ಎಂಬ ನಕಲಿ ಮೆಸೇಜ್ ಸೃಷ್ಟಿಸಿ ಕಳಿಸುತ್ತದೆ. ಇದು ಮುಖ್ಯವಾಗಿ ಈ ಬಗ್ಗೆ ಹೆಚ್ಚೇನೂ ತಿಳಿಯದ ವ್ಯಾಪಾರಸ್ಥರು ತುಂಬಾ ಮೋಸ ಹೋಗಬಹುದಾದ ವಿಧಾನವಾಗಿದೆ. ಹೀಗಾಗಿ ಎಚ್ಚರವಿರಲು ಪೊಲೀಸರು ತಿಳಿಸಿದ್ದಾರೆ. ಅನುಮಾನ ಇದ್ದಾಗ ಮೆಸೇಜ್ ಜೊತೆಗೆ ಅಕೌಂಟ್ ಬ್ಯಾಲೆನ್ಸ್ ಕೂಡ ಚೆಕ್ ಮಾಡಿಕೊಂಡು ಖಚಿತಪಡಿಸಿಕೊಳ್ಳುವುದು ಒಳ್ಳೆಯದು.