ಶ್ರೀಕೃಷ್ಣನ ಜೀವನ–ಸಂದೇಶಗಳು ಸಾವಿರಾರು ವರ್ಷಗಳಿಂದ ನಮ್ಮ ಜೀವನವನ್ನು ಪ್ರಭಾವಿಸುತ್ತಬಂದಿವೆ. ಇಂದಿಗೂ ಇವು ಪ್ರಸ್ತುತವಾಗಿರುವುದು ಸುಳ್ಳಲ್ಲ. ಕೃಷ್ಣನ ಬಾಲ್ಯವನ್ನು ನಮ್ಮ ಮಕ್ಕಳ ಬಾಲ್ಯದಲ್ಲಿ ಕಾಣಲು ತವಕಿಸುತ್ತೇವೆ ಅವನ ಪ್ರೀತಿ–ಪ್ರೇಮಗಳು ನಮ್ಮೆಲ್ಲರ ಜೀವನದಲ್ಲಿ ತುಂಬಿಬರಲೆಂದು ಬಯಸುತ್ತೇವೆ. ಅವನ ಕುಶಲತೆ ನಮ್ಮ ಬದುಕಿನ ಬೆಳಕಾಗಲಿ ಎಂದು ಆಶಿಸುತ್ತೇವೆ; ಅವನ ಪ್ರಬುದ್ಧತೆ ನಮ್ಮ ಸಂಕಷ್ಟದಲ್ಲಿ ದಾರಿಯಾಗಿ ತೋರಲಿ ಎಂದು ಅನ್ವೇಷಿಸುತ್ತೇವೆ. ಅವನ ಜೀವನಪ್ರೀತಿಯೊಂದಿಗೆ ನಾವೂ ಕುಣಿಯುತ್ತೇವೆ. ಅವನ ವೈರಾಗ್ಯ ಪ್ರವೃತ್ತಿಗೆ ಬೆರಗಾಗುತ್ತೇವೆ. ಎಷ್ಟೊಂದು ಗುಣಗಳ ಸಾಗರ ಅವನು ಎಂದು ಆರಾಧಿಸುತ್ತಲೇ, ಅವನು ಮನುಷ್ಯನೋ ದೇವರೋ ಎಂದು ಗೊಂದಲದಲ್ಲಿ ಮುಳುಗುತ್ತೇವೆ.
ಶ್ರೀ ಕೃಷ್ಣನು ಒಮ್ಮೆ ಧರ್ಮಾತ್ಮನಾಗಿ ಕಾಣುತ್ತಾನೆ ಮತ್ತೊಮ್ಮೆ ಕಪಟಿಯಾಗಿ ತೋರುತ್ತಾನೆ. ಒಮ್ಮೆ ಯೋಗಿಯಾಗಿ ಕಂಡರೆ, ಮಗದೊಮ್ಮೆ ಭೋಗಿಯಾಗಿ ಪ್ರತ್ಯಕ್ಷನಾಗುತ್ತಾನೆ. ಒಮ್ಮೆ ಸ್ನೇಹಿತನಂತೆ ಜೊತೆಯಲ್ಲಿರುವಂತೆ ಭಾಸವಾಗುತ್ತಿರುತ್ತದೆ ಮರುಕ್ಷಣವೇ ಅವನೊಬ್ಬ ಜಗದ್ಗುರುವಾಗಿ ದರ್ಶನ ಕೊಡುತ್ತಾನೆ. ಒಂದು ಕ್ಷಣ ನಮಗೆ ಅರ್ಥವಾಗುತ್ತಿದ್ದಾನೆ ಎಂದೆನಿಸುತ್ತದೆ, ತತ್‌ಕ್ಷಣವೇ ನಮ್ಮ ಭಾವ–ಬುದ್ಧಿಗಳಿಗೆ ಅವನು ಅತೀತ ಎಂಬ ಅನುಭವ ದಟ್ಟವಾಗುತ್ತದೆ. ಒಟ್ಟಿನಲ್ಲಿ ಅವನನ್ನು ಹೀಗೆ ಎಂದು ನಿರ್ಣಯಿಸಿ ಅವನೊಂದಿಗೆ ವ್ಯವಹರಿಸುವುದಕ್ಕೆ ಆಗುವುದಿಲ್ಲ ಎಂಬುದಂತೂ ಸ್ಪಷ್ಟ.
ಹೀಗಾಗಿಯೇ ಡಿವಿಜಿ ಅವರು ‘ಶ್ರೀಕೃಷ್ಣ ಎಂಬುದು ಪ್ರಸಿದ್ಧ ರಹಸ್ಯ’ ಎಂದು ಉದ್ಗರಿಸಿರುವುದು. ಇದು ಏಕೆಂಬುದನ್ನು ಡಿವಿಜಿ ಅವರ ಈ ಮಾತುಗಳು ಸೊಗಸಾಗಿ ನಿರೂಪಿಸುತ್ತವೆ. ‘ಕೃಷ್ಣನು ಸಾಮಾನ್ಯನೂ ಹೌದು; ಅದ್ಭುತನೂ ಹೌದು. ಮನುಷ್ಯನಾದವನು ಏನೇನನ್ನು ಬಯಸಬಹುದೋ, ಏನೇನನ್ನು ಉತ್ತಮವೆಂದು ಭಾವಿಸಬಹುದೋ, ಮನುಷ್ಯನಿಗೆ ಯಾವುದು ಶ್ರೇಯಸ್ಸೆಂದು ಅನ್ನಿಸುತ್ತದೆಯೋ ಆ ಎಲ್ಲ ಜಾತಿಯ ಭಾಗ್ಯಗಳ ಸಂಮೇಳನಮೂರ್ತಿಯೇ ಶ್ರೀಕೃಷ್ಣ. ಶ್ರೀಕೃಷ್ಣಾವತಾರವು ಮನಸ್ಸಿನ ದೃಷ್ಟಿಯಿಂದ ಸರ್ವಾಂಗ ಸಂಪೂರ್ಣವಾದ ಅವತಾರ. ನಮಗೆ ಏನೆಲ್ಲ ಬೇಕೋ ಅದನ್ನೆಲ್ಲವನ್ನೂ ಪೂರೈಸಬಲ್ಲವನು ಶ್ರೀಕೃಷ್ಣ ಎನ್ನುವುದು ಇದರಿಂದ ಸಿದ್ಧವಾಗುತ್ತದೆ.
ಇಲ್ಲಿ ನಮಗೆ ಬೇಕಾಗಿರುವುದು ಎಂದರೆ ಭೌತಿಕವಾಗಿ ಒದಗುವಂಥ ವಸ್ತುಗಳು ಎಂದಲ್ಲ ನಮ್ಮ ಮನಸ್ಸಿಗೆ ಬೇಕಾಗಿರುವಂಥ ವಿವರಗಳು ಎನ್ನುವುದು ಇಲ್ಲಿರುವ ಧ್ವನಿ. ಹೀಗೆ ನಮ್ಮ ಎಲ್ಲ ಸ್ಥಿತಿಗಳಲ್ಲೂ ಒದಗಬಲ್ಲಂಥ ಜಗದ್ಗುರುವೇ ಶ್ರೀಕೃಷ್ಣ. ಶ್ರೀಕೃಷ್ಣನ ಉಪದೇಶವನ್ನು ಸಂಗ್ರಹವಾಗಿ ಒಂದೆಡೆ ನಾವು ನೋಡುವಂಥದ್ದು ಭಗವದ್ಗೀತೆಯಲ್ಲಿಯೇ. ಅವನು ಕೇವಲ ಉಪದೇಶವನ್ನಷ್ಟೆ ಮಾಡಿದವನಲ್ಲ ಅವನ ಉಪದೇಶಗಳಿಗೆ ಅವನ ಜೀವನವೇ ಸೊಗಸಾದ ಉದಾಹರಣೆಯೂ ಆಗಿದೆ. ಹೀಗಾಗಿ ಅವನ ಉಪದೇಶಗಳಿಗೆ ಭಗವದ್ಗೀತೆಯನ್ನು ನೋಡುವಂತೆ, ಅವನ ಜೀವನಕ್ಕೆ – ಎಂದರೆ ಉಪದೇಶಗಳಿಗೆ ವ್ಯಾಖ್ಯಾನವನ್ನು ಮಹಾಭಾರತ, ಭಾಗವತಗಳಲ್ಲಿ ನೋಡಬಹುದು.
ಹಾಗಾದರೆ ಸದ್ಯದ ಪರಿಸ್ಥಿತಿಯಲ್ಲಿ ಕೃಷ್ಣ ಹೇಗೆ ನಮಗೆ ನೆರವಾಗುತ್ತಾನೆ? ಎಂದು ನೋಡುವುದಾದರೆ ಶ್ರೀಕೃಷ್ಣನು ಭಗವದ್ಗೀತೆಯನ್ನು ಉಪದೇಶಿಸಿದ್ದೇ ಯುದ್ಧಭೂಮಿಯಲ್ಲಿ. ಸದ್ಯದಲ್ಲಿ ನಾವು ಕೂಡ ಯುದ್ಧಭೂಮಿಯಲ್ಲಿ ನಿಂತಂತೆ ಭಾಸವಾಗುತ್ತಿದೆ. ಇದು ಕೇವಲ ಹೊರಗಿನ ಶತ್ರುಗಳಿಂದಲೇ ನಡೆಯುವಂಥ ಯುದ್ಧವಾಗಬೇಕಿಲ್ಲ; ನಮ್ಮ ಒಳಗಿನ ಶತ್ರುಗಳಿಂದಲೂ ನಡೆಯುವ ಯುದ್ಧವೂ ಆಗಬಹುದು. ಈ ನೆಲೆಯಿಂದ ಯೋಚಿಸಿದಾಗ, ಯುದ್ಧ ಎನ್ನುವುದು ನಮ್ಮ ಜೀನವದುದ್ದಕ್ಕೂ ನಡೆಯುವಂಥ ಹಗರಣವೇ ಆಗಿರುತ್ತದೆ. ಹೀಗಾಗಿಯೇ ಡಿವಿಜಿಯವರು ಮೇಲಣ ಪದ್ಯದಲ್ಲಿ ಹೇಳಿರುವುದು: ‘ಜಗತ್ತು ಎಂಬುದೇ ಒಂದು ರಣರಂಗ. ಈ ಯುದ್ಧದಲ್ಲಿ ಶ್ರೀಕೃಷ್ಣನ ಸ್ಮರಣೆಯಿಂದಲೇ ಜಯ ಒದಗುತ್ತದೆ.
ಇಲ್ಲಿ ಶ್ರೀಕೃಷ್ಣನ ಸ್ಮರಣೆ ಎಂದರೆ, ಅವನ ಜೀವನ ದರ್ಶನಗಳ ಅನುಸಂಧಾನ. ಇದು ನಮ್ಮ ಸದ್ಯದ ಪರಿಸ್ಥಿತಿಗೆ ಹೇಗೆ ನೆರವಾಗುತ್ತದೆ? ನಮ್ಮ ಜೀವನದಲ್ಲಿ ಎದುರಾಗುವ ಎಲ್ಲ ಕೆಲಸಗಳನ್ನೂ ಯೋಗದ ಮೂಲಕ ನಿರ್ವಹಿಸಬೇಕು ಎನ್ನುತ್ತಾನೆ, ಕೃಷ್ಣ. ಇಲ್ಲಿ ಯೋಗ ಎಂದರೇನು? ನಾವು ನಮ್ಮ ಪಾಲಿನ ಕೆಲಸಗಳಲ್ಲಿ ತೊಡಗುವಾಗ ತೋರುವ ಜಾಣ್ಮೆಯೇ, ಕುಶಲತೆಯೇ ಯೋಗ ಎಂದಿದ್ದಾನೆ ಅವನು. ಈ ಕುಶಲತೆಯನ್ನು ಹೇಗೆ ತಿಳಿದುಕೊಳ್ಳುವುದು? ಅದು ನಮಗೆ ಭಗವದ್ಗೀತೆಯ ಅಧ್ಯಯನದಿಂದ ಗೊತ್ತಾಗುತ್ತದೆ. ಹೀಗಾಗಿಯೇ ಎಲ್ಲ ಕಾಲಕ್ಕೂ ಒದಗುವ ಜೀವನಕೈಪಿಡಿಯಾಗಿ ಭಗವದ್ಗೀತೆ ಒದಗಿಬರುತ್ತದೆ. ಶ್ರೀಕೃಷ್ಣ ನಮಗೆ ನಿತ್ಯಗುರುವಾಗಿ ಒದಗುತ್ತಾನೆ.
ಈ ಪ್ರಪಂಚದಲ್ಲಿ ಎಲ್ಲಕ್ಕಿಂತ ಮಹಾ ಪಾಪ ಯಾವುದು? ಕೆಲವರು ಸುಳ್ಳು ಹೇಳುವುದನ್ನು ಮಹಾ ಪಾಪ ಎನ್ನುತ್ತಾರೆ. ಕೆಲವರು ಮೋಸ ಮಾಡುವುದನ್ನು, ದುರಸೆಯನ್ನು ಮಹಾ ಪಾಪ ಎನ್ನುತ್ತಾರೆ. ಆದರೆ ಇದೆಲ್ಲದಕ್ಕಿಂತ ಮಹಾ ಪಾಪ ಸ್ತ್ರೀಯರನ್ನು ಅವಮಾನಿಸುವುದು. ಸ್ತ್ರೀಯರ ಮಾನಭಂಗ ಮಾಡುವುದು ಇದು ಎಲ್ಲಕ್ಕಿಂತ ಮಹಾಪಾಪ. ಏಕೆಂದರೆ ಈ ಅಪರಾಧ ಬರೀ ಸ್ತ್ರೀಯರ ಮೇಲೆ ಅಷ್ಟೇ ಅಲ್ಲದೆ ಅವರ ಆತ್ಮ ಮತ್ತು ಮನಸ್ಸಿನ ಮೇಲೆ ಕೂಡಾ ಪ್ರಭಾವವನ್ನು ಬೀರುತ್ತದೇ. ಹಾಗಾದ್ರೆ ಇಂತಹ ಪಾಪವನ್ನು ಮಾಡಿದವರಿಗೆ ದಂಡನೆ ಅಥವಾ ಶಿಕ್ಷೆ ಏನೂ? ಕೆಲವರು ಇಂತಹ ಪಾಪಕ್ಕೆ ಶಿಕ್ಷೆಯಾಗಿ ಚಿತ್ರ ಹಿಂಸೆ ನೀಡಬೇಕು ಎಂದರೆ ಇನ್ನೂ ಕೆಲವರು ಮೃತ್ಯು ದಂಡ ಎನ್ನುತ್ತಾರೆ. ಆದರೆ ಈ ಅಪರಾಧಕ್ಕೆ ಶಿಕ್ಷೆ ಕೊಡುವುದಕ್ಕೂ ಮೊದಲು ನಾವು ಮುಖ್ಯವಾಗಿ ತಿಳಿದುಕೊಳ್ಳಬೇಕಾಗಿರುವ ವಿಷಯ ಎಂದರೆ ಅಪರಾಧಿ ಯಾರೂ ಎನ್ನುವುದು.
ಅಪರಾಧಿ ಸ್ತ್ರೀಯರ ಅವಮಾನ ಮಾಡಿದವನು ಅಥವಾ ಮಾನಭಂಗ ಮಾಡಿದವನೇ ಆಗಿರುತ್ತಾನೆ. ಆದರೆ ಇದು ಸಂಪೂರ್ಣ ಸತ್ಯವಾದದ್ದ? ಸ್ವತಃ ಅಪಮಾನಿಸಿಕೊಳ್ಳಲು ಮತ್ತು ಸ್ವತಃ ಮಾನ ಕಳೆದುಕಳ್ಳಲು ಒಮ್ಮೊಮ್ಮೆ ಸ್ತ್ರೀ ಕೂಡಾ ಕಾರಣವಾಗಬಹುದು. ಯೋಚಿಸಿದರೆ ಉತ್ತರ ಹೀಗೇ.. ಮಾನ ಹೋಗುವುದನ್ನು ಕಾಪಾಡಿಕೊಳ್ಳಲು ಮೊದಲು ಮಾನವೆಂಬ ರೇಖೆಯ ಮೇಲೆ ದೃಷ್ಟಿ ಹರಿಸಬೇಕು. ರಾವಣ ಸೀತೆಯನ್ನು ಅಪಹರಣ ಮಾಡಿದ್ದಕ್ಕೆ ಸೀತೆ ಮೈ ಮರೆತಿದ್ದು ಕಾರಣ. ರಾವಣ ಮತ್ತು ತನ್ನ ನಡುವೆ ಇದ್ದ ಗೆರೆಯನ್ನು ದಾಟಿದ್ದಳು. ಆದ್ರೆ ಅಶೋಕವನದಲ್ಲಿ ಅದೇ ಸೀತೆಯನ್ನು ರಾವಣ ಸ್ಪರ್ಶ ಮಾಡುವುದಕ್ಕೂ ಸಹ ಆಗಲಿಲ್ಲ. ಯಾಕಂದ್ರೆ ಸೀತೆ ತನ್ನ ಮತ್ತು ರಾವಣನ ನಡುವೆ ತೆಳ್ಳಗಿನ ಗರಿಕೆಯ ಗೋಡೆಯನ್ನು ಕಟ್ಟಿದ್ದಳು.
ಜೀವನದಲ್ಲಿ ಇಲ್ಲಾ ಎನ್ನುವುದನ್ನು ಕಲಿಯಬೇಕು ಯಾರಾದ್ರೂ ನಿಮ್ಮ ಮರ್ಯಾದೆಯ ಗಡಿ ದಾಟಿದರೆ ಅವರನ್ನು ಅಲ್ಲಿಯೇ ತಡೆದು ನಿಲ್ಲಿಸುವುದನ್ನು ಕಲಿಯಬೇಕು. ನಿಮ್ಮ ಮೇಲೆ ಎತ್ತಿದ ಮೊದಲ ಕೈಯನ್ನೂ ಹಾಗೂ ದೃಷ್ಟಿಯನ್ನೂ ಅಲ್ಲಿಯೇ ತಡೆಯಬೇಕು. ಆಗ ಯಾವೊಬ್ಬ ಪುರುಷ ಸಹ ಸ್ತ್ರೀಯನ್ನು ಅಪಮಾನ ಮಾಡುವ ಸಾಹಸವನ್ನು ಮಾಡುವುದಿಲ್ಲ. ಏಕೆಂದರೆ ಹೆಣ್ಣು ಜನನಿ, ದೇವತೆ. ನೀವು ನಿಮ್ಮನ್ನೇ ಅಬಲೆ ಎಂದುಕೊಂಡು ಅಪಮಾನ ಮಾಡಿಕೊಳ್ಳಬೇಡಿ.