1947 ರಲ್ಲಿ ಕೂಡಲ ಸಂಗಮ ಹೇಗಿತ್ತು ಗೋತ್ತಾ? ಇಲ್ಲಿದೆ ನೀವು ನೋಡಿರದ ಅಪರೂಪದ ವೀಡಿಯೊ

0

ಬುದ್ಧನ ನಂತರ ಭಾರತ ಕಂಡ ಶ್ರೇಷ್ಠ ದಾರ್ಶನಿಕರಲ್ಲಿ ಒಬ್ಬರಾದ ಬಸವಣ್ಣ ಐಕ್ಯವಾದ ಈ ಸ್ಥಳ ರಾಷ್ಟೀಯ ಹೆದ್ದಾರಿ ೧೩ ರಲ್ಲಿ ಹುನಗುಂದ – ಆಲಮಟ್ಟಿ ನಡುವೆ ಇದ್ದು, ಕೃಷ್ಣ, ಮಲಪ್ರಭಾ, ಘಟಪ್ರಭಾ ನದಿಗಳ ಸಂಗಮ ಸ್ಥಾನವಾಗಿದೆ. ೧೧ ಮತ್ತು ೧೨ ನೇ ಶತಮಾನದಲ್ಲಿ ಕನ್ನಡ ನಾಡಿನ ಸಾಮಾಜಿಕ, ಧಾರ್ಮಿಕ ಹಾಗೂ ಸಾಹಿತ್ಯ ಚಳುವಳಿಗೆ ತನ್ನ ಚಿಂತನೆಗಳ ಮೂಲಕ ಹೊಸ ತಿರುವು ಕೊಟ್ಟ ಬಸವಣ್ಣ ಬಾಲ್ಯದಲ್ಲಿ ಅಕ್ಷರ ಸಂಸ್ಕೃತಿಯ ಮೂಲಕ ತನ್ನ ಬದುಕಿಗೆ ಜ್ಞಾನದ ಜ್ಯೋತಿಯನ್ನು ಹತ್ತಿಸಿಕೊಂಡಿದ್ದು ಇದೆ ಸ್ಥಳದಲ್ಲಿ.

ಹಿಂದೆ ಕಪ್ಪಡಿ ಸಂಗಮ ಎಂದು ಕರೆಸಿಕೊಳ್ಳುತ್ತಿದ್ದ ಕೂಡಲ ಸಂಗಮಕ್ಕೆ ಬಂದ ಬಸವಣ್ಣ ಮರಳಿನ ಮೇಲೆ ಅಕ್ಷರ ತಿದ್ದುತ್ತಾ  ಪ್ರಾಪಂಚಿಕ ಬದುಕಿಗೆ ತನ್ನನ್ನು ತಾನು ತೆರೆದುಕೊಂಡದ್ದಲ್ಲದೆ ಅಂದಿನ ವರ್ತಮಾನ ಎಲ್ಲಾ ವೈರುಧ್ಯಗಳ ವಿರುದ್ಧ ಹೋರಾಡುತ್ತಲೇ ಸಮಾಜಕ್ಕೆ ವೈಚಾರಿಕತೆಯ ಕಿಡಿ ಹೊತ್ತಿಸಿ ಕೊನೆಗೆ ತನ್ನ ಬದುಕನ್ನು ಅಂತ್ಯಗೊಳಿಸಿಕೊಂಡದ್ದು ಇದೆ ಸ್ಥಳದಲ್ಲಿ. ಮೊದಲಿಗೆ ಈ ಸ್ಥಳದಲ್ಲಿ ಎರಡು ನದಿಗಳು ಹಳ್ಳದ ಮಾದರಿಯಲ್ಲಿ ಹರಿಯುತ್ತಿದ್ದವು, ಸರ್ಕಾರ ನಾರಾಯಣಪುರ ಜಲಾಶಯ( ಬಸವ ಸಾಗರ) ನಿರ್ಮಿಸಲು 1963 ರಲ್ಲಿ ಅಡಿಗಲ್ಲು ಹಾಕಿತು. ಜಲಾಶಯದ ಹಿನ್ನೀರಿನಲ್ಲಿ ಬಸವಣ್ಣನವರ ಐಕ್ಯ ಸ್ಥಳ ಮುಳುಗಿ ಹೋಗಲಿದ್ದ ಕಾರಣ ಅಂದಿನ ಮುಖ್ಯಮಂತ್ರಿ ಎಸ್ ನಿಜಲಿಂಗಪ್ಪ ಸಂರಕ್ಷಣೆಗೆ ಮುಂದಾಗಿದ್ದರು.

ಮುಂದೆ ಮುಖ್ಯಮಂತ್ರಿ ದೇವರಾಜ ಅರಸರು ಬಸವಣ್ಣನ ಐಕ್ಯ ಸ್ಥಳ ಸಂರಕ್ಷಣೆಗೆ 2.2 ಲಕ್ಷ ವೆಚ್ಚದಲ್ಲಿ 18 ಮೀಟರ್ ವ್ಯಾಸದ ದುಂಡಾಕಾರವಾದ ಬಾವಿ ನಿರ್ಮಿಸಿದ್ದರು. ಕೃಷ್ಣಾ ಮೇಲ್ದಂಡೆ ಯೋಜನೆ ಅಧಿಕಾರಿಗಳ ಮೇಲ್ವಿಚಾರಣೆಯಲ್ಲಿ ಯೋಜನೆ ಅನುಷ್ಠಾನಗೊಂಡು ಬಸವಣ್ಣನವರ ಐಕ್ಯ ಮಂಟಪ 1979 ರಲ್ಲಿ ಹೊಸ ರೂಪ ಪಡೆದಿತ್ತು. ಆಗ ಬಾವಿ ನಿರ್ಮಿಸುವ ಜೊತೆಗೆ ಐಕ್ಯ ಮಂಟಪ ವೀಕ್ಷಣೆಗೆ ಕಟ್ಟಿಗೆಯ ಮೆಟ್ಟಿಲುಗಳ ವ್ಯವಸ್ಥೆ ಮಾಡಲಾಗಿತ್ತು. ಸರ್ಕಾರ 1997 ರಲ್ಲಿ ಕೂಡಲ ಸಂಗಮ ಅಭಿವೃದ್ಧಿ ಮಂಡಳಿ ಪ್ರಾರಂಬಿಸಿತ್ತು. ಅಂದಿನ ಮುಖ್ಯಮಂತ್ರಿ ಜೆ,ಎಚ್.ಪಟೇಲ್ 36 ಕೋಟಿ ಏಕಕಾಲದಲ್ಲಿ ಬಿಡುಗಡೆ ಮಾಡಿ ಬಸವಣ್ಣನವರ ಐಕ್ಯ ಸ್ಥಳದ ಅಭಿವೃದ್ಧಿಗೆ ನಾಂದಿ ಹಾಡಿದ್ದರು.

ಆಗ ಕೂಡಲ ಸಂಗಮ ಅಭಿವೃದ್ಧಿ ಮಂಡಳಿ ವಿಶೇಷಾಧಿಕಾರಿಯಾಗಿ ಡಾ ಶಿವಾನಂದ ಜಾಮದಾರ ಅವರನ್ನು ನೇಮಕ ಮಾಡಿ ಅಲ್ಲಿನ ಕೆಲಸಗಳಿಗೆ ವೇಗ ನೀಡಿದರು. ಬಸವಣ್ಣನವರ ಐಕ್ಯ ಮಂಟಪದೊಳಗೆ ನದಿಯ ನೀರು ಬರಬಾರದು ಎಂಬ ಉದ್ದೇಶದಿಂದ ಮಂಡಳಿ ಟೈಲ್ಸ್ ಅಳವಡಿಸಿದೆ ಐಕ್ಯ ಮಂಟಪಕ್ಕೆ ಹೋಗಿ  ಬರಲು ಸುಸಜ್ಜಿತ ಮೆಟ್ಟಿಲುಗಳನ್ನು ನಿರ್ಮಿಸಲಾಗಿದೆ. ಮಳೆ ಬಂದಾಗ ಭಕ್ತರಿಗೆ ಅನಾನುಕೂಲ ಆಗಬಾರದೆಂಬ ಉದ್ದೇಶದಿಂದ ಸಂಚಾರ ಸ್ಥಳದಲ್ಲಿ ಮೇಲ್ಛಾವಣಿ ಹಾಕಿದ್ದಾರೆ.

Leave A Reply

Your email address will not be published.

error: Content is protected !!