ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ತ್ರಿಂಬಕ್ ಪಟ್ಟಣಲ್ಲಿನ ಒಂದು ಪ್ರಾಚೀನ ಹಿಂದೂ ದೇವಾಲಯ. ಇದು ನಾಸಿಕ್ ನಗರದಿಂದ ಸುಮಾರು 28 km ದೂರದಲ್ಲಿ ಗೋದಾವರಿ ನದಿಯ ಉಗಮ ಸ್ಥಾನದ ಬಳಿಯಲ್ಲಿದೆ. ಶಿವನ ದೇವಾಲಯವಿರುವ ಈ ಕ್ಷೇತ್ರವು ದ್ವಾದಶ ಜ್ಯೊತಿರ್ಲಿಂಗಗಳಲ್ಲಿ ಒಂದು. ಸಮೀಪದಲ್ಲಿರುವ ಬ್ರಹ್ಮ ಗಿರಿ ಬೆಟ್ಟದ ಸಾಲಿನಲ್ಲಿ ಉದ್ಭವಿಸುವ ಗೋದಾವರಿ ನದಿಯು ಭಾರತ ಜಂಬುದ್ವೀಪದ ಅತಿ ಉದ್ದದ ನದಿಯಾಗಿದೆ, ತ್ರ್ಯಂಬಕೇಶ್ವರದ ಕುಶಾವರ್ತ ಎಂಬ ಕುಂಡದಿಂದ ಮುಂದೆ ಗೋದಾವರಿ ಹರಿವು ಸ್ಪಷ್ಟವಾಗಿರುವುದರಿಂದ ಈ ಸ್ಥಾನವನ್ನು ಹಿಂದೂ ಶ್ರದ್ಧಾಳುಗಳು ಪವಿತ್ರವೆಂದು ಭಾವಿಸಿ ಪುಣ್ಯ ಸ್ನಾನ ಕೈಗೊಳ್ಳುವರು.
ತ್ರ್ಯಂಬಕೇಶ್ವರದ ವೈಶಿಷ್ಟ್ಯವೆಂದರೆ ಇಲ್ಲಿನ ಜ್ಯೊತಿರ್ಲಿಂಗಗಳು ಮೂರು ಮುಖಗಳನ್ನು ಹೊಂದಿದ್ದು ಈ ಮುಖಗಳು ಬ್ರಹ್ಮ, ವಿಷ್ಣು, ಮತ್ತು ಶಿವನ ಪ್ರತೀಕವಾಗಿದೆ. ಭಾರತದ ಉಳಿದ ಹನ್ನೊಂದು ಜ್ಯೊತಿರ್ಲಿಂಗಗಳೆಲ್ಲವೂ ಶಿವಪ್ರಧಾನವಾಗವೆ. ಬ್ರಹ್ಮ ಗಿರಿ ಬೆಟ್ಟಗಳ ತಪ್ಪಲಿನಲ್ಲಿರುವ ತ್ರ್ಯಂಬಕೇಶ್ವರ ದೇವಾಲಯವು ಕರಿಕಲ್ಲಿನಿಂದ ಕಟ್ಟಲ್ಪಟ್ಟಿದ್ದು ಸುಂದರ ವಾಸ್ತುಶಿಲ್ಪಕ್ಕೆ ಹೆಸರಾಗಿದೆ. ಇಲ್ಲಿಂದ 7km ದೂರದಲ್ಲಿರುವ ಆಂಜನೇರಿ ಪರ್ವತವು ಹನುಮನ ಜನ್ಮ ಸ್ಥಳವೆಂದು ಹೆಸರುವಾಸಿ ಆಗಿದೆ.
ತ್ರ್ಯಂಬಕೇಶ್ವರ ದೇವಾಲಯವು ಬಸಾಲ್ಟ್ ಎನ್ನುವ ಕಲ್ಲಿನಿಂದ ನಿರ್ಮಿಸಲಾಗಿದೆ. ಒಮ್ಮೆ ಜ್ಯೊತಿರ್ಲಿಂಗದ ಸುತ್ತ ಇರುವ ಕಲ್ಲುಗಳು ಟೊಳ್ಳಾಗಿವೆಯೇ ಇಲ್ಲವೇ ಎನ್ನುವ ಚರ್ಚೆಗಳು ಏರ್ಪಟ್ಟಿತ್ತು. ಇದನ್ನು ಪೇಶ್ವ ನಾನಾ ಸಾಹೇಬನು ಟೊಳ್ಳಾಗಿದೆ ಎಂದು ಬಾಜಿ ಕಟ್ಟಿದನು. ಆದರೆ ಅವನ ಊಹೆ ತಪ್ಪಾಯಿತು, ಬಾಜಿಯಲ್ಲಿ ಅವನು ಸೋತನು. ನಂತರ ಆ ಕಲ್ಲುಗಳಿಂದಲೇ ಅದ್ಬುತವಾದ ದೇವಾಲಯವನ್ನು ನಿರ್ಮಿಸಿದನು ಎಂದು ಹೇಳಲಾಗುವುದು.
ಗೋದಾವರಿ ನದಿಯಲ್ಲಿ ಮಿಂದು ಶಿವನ ಪೂಜೆಗೆ ಹೋಗಬೇಕು, ಪೂಜೆಗೆ ಬೇಕಾದ ಆರತಿ, ದೀಪ ಉಡುಗೆ ಹಾಕಲು ತೆಂಗಿನಕಾಯಿ, ಎಲ್ಲಾ ಮಂಗಳದ್ರವ್ಯಗಳನ್ನು ನದಿಯ ಸೋಪಾನದ ಮೇಲೆ ಮಾರಲು ಇಟ್ಟಿರುತ್ತಾರೆ. ಪೂಜೆ ಮಾಡಿ ದೀಪ ಹಚ್ಚಿ ನದಿಯಲ್ಲಿ ತೇಲಿ ಬಿಡಬೇಕು. ಆ ದೃಶ್ಯಗಳು ನೋಡಲು ಬಹಳ ಚಂದ, ಗೋರಾರಾಮ, ಕಾಲರಾಮ, ಆಂಜನೇಯ, ದುರ್ಗಾ ಮೊದಲಾದ ಅನೇಕ ಪೂರಾತನ ಸುಂದರ ದೇವಾಲಯಗಳಿವೆ.
ಈ ಪವಿತ್ರವಾದ ದೇವಾಲಯದಲ್ಲಿ ಜಗತ್ ಪ್ರಸಿದ್ಧವಾದ ನಾಸಿಕ್ ವಜ್ರವಿತ್ತು. ಮೂರನೇ ಆಂಗ್ಲೋ ಮರಾಠಾ ಯುದ್ಧದಲ್ಲಿ ಇದನ್ನು ಬ್ರಿಟಿಷರು ಲೂಟಿ ಮಾಡಿದರು ಎನ್ನಲಾಗುವುದು. ಇದೀಗ ಆ ವಜ್ರವು USA ಕನೆಕ್ಟಿಕಟ್ ಗ್ರೀನ್ವಿಚ್ ಸಂಸ್ಥೆಯ ಕಾರ್ಯನಿರ್ವಾಹಕ ಎಡ್ವರ್ಡ್ಸ್ ಜೆ ಹ್ಯಾಂಡ್ ಅವರ ಬಳಿ ಇದೆ ಎಂದು ಹೇಳಲಾಗುತ್ತದೆ.