ಯಶ್ ಮತ್ತು ರಾಧಿಕಾ ಪಂಡಿತ್ ಇವರು ಒಂದೇ ಧಾರಾವಾಹಿ ಮೂಲಕ ತೆರೆಗೆ ಬಂದರು. ನಂತರದಲ್ಲಿ ಸಿನೆಮಾಗಳಲ್ಲಿ ನಟನೆಯನ್ನು ಶುರು ಮಾಡಿದರು. ಹಾಗೆಯೇ ಮೊಗ್ಗಿನ ಮನಸ್ಸು ಚಿತ್ರ ಇವರಿಬ್ಬರ ನಟನೆಯ ಮೊದಲನೆಯ ಚಿತ್ರವಾಗಿದೆ. ಇದು ಇವರ ನಟನೆಯಿಂದಾಗಿ ಬಹಳ ಚೆನ್ನಾಗಿ ಮೂಡಿ ಬಂದಿದೆ. ಈಗಲೂ ಕೂಡ ಈ ಸಿನೆಮಾ ಬಂತೆಂದರೆ ಎಲ್ಲರೂ ಬಹಳ ಖುಷಿಯಿಂದ ನೋಡುತ್ತಾರೆ. ಆದ್ದರಿಂದ ನಾವು ಇಲ್ಲಿ ಯಶ್ ಮತ್ತು ರಾಧಿಕಾ ಪಂಡಿತ್ ಅವರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.
ಕಿರುತೆರೆಯಲ್ಲಿ ಜೊತೆಜೊತೆಯಾಗಿ ಬಂದವರಲ್ಲಿ ಯಶ್ ಮತ್ತು ರಾಧಿಕಾ ಕೂಡ ಒಬ್ಬರು. 2016ರಲ್ಲಿ ಯಶ್-ರಾಧಿಕಾ ಮದುವೆ ನಡೆದಿತ್ತು. ರಾಧಿಕಾ ಪಂಡಿತ್ ಮತ್ತು ಯಶ್ ಬಹುವರ್ಷಗಳಿಂದ ಪರಸ್ಪರ ಗುಟ್ಟಾಗಿ ಪ್ರೀತಿಸುತ್ತಿದ್ದರು. ಆದರೆ ಯಾರಿಗೂ ಹೇಳಿಕೊಂಡಿರಲಿಲ್ಲ. ಹಾಗೆಯೇ ಯಾವ ಸಾಮಾಜಿಕ ಜಾಲತಾಣಗಳಲ್ಲಿ ಕೂಡ ಹೇಳಿಕೊಂಡಿರಲಿಲ್ಲ. ಆದ್ದರಿಂದ ಇದು ಬಹಳ ಗುಟ್ಟಾಗಿಯೇ ಇತ್ತು. 2016ರ ಆಗಸ್ಟ್ನಲ್ಲಿ ಇವರಿಬ್ಬರ ನಿಶ್ಚಿತಾರ್ಥ ಅದ್ದೂರಿಯಾಗಿ ನೆರವೇರಿತು. ಅದೇ ವರ್ಷ ಡಿಸೆಂಬರ್ 9ರಂದು ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ಅದ್ದೂರಿಯಾಗಿ ಮದುವೆಯಾದರು.
ತಮ್ಮ ನೆಚ್ಚಿನ ನಟ ಮತ್ತು ನಟಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು ಅಭಿಮಾನಿಗಳಿಗೆ ಸಖತ್ ಖುಷಿ ನೀಡಿತ್ತು. ಆ ಶುಭ ಸಮಾರಂಭ ನೆರವೇರಿ ಇಂದಿಗೆ ನಾಲ್ಕು ವರ್ಷ ಕಳೆದಿದೆ. ಮದುವೆ ಬಳಿಕ ನಟನೆಗಿಂತಲೂ ಹೆಚ್ಚಾಗಿ ಕುಟುಂಬದ ಕಡೆಗೆ ಗಮನ ನೀಡಿದರು ರಾಧಿಕಾ ಪಂಡಿತ್. ಬಾಳಿನ ಪಯಣದಲ್ಲೂ ಪತಿ ಮತ್ತು ಪತ್ನಿಯಾಗಿ ಸುಖ ಸಂಸಾರ ನಡೆಸುತ್ತಿರುವ ಅವರಿಗೆ ಈಗ ನಾಲ್ಕನೇ ವರ್ಷದ ವೆಡ್ಡಿಂಗ್ ಆ್ಯನಿವರ್ಸರಿ ಸಂಭ್ರಮ ಮುಗಿದಿದೆ. ಅವರಿಗೆ ಅಭಿಮಾನಿಗಳು, ಸ್ನೇಹಿತರು ಮತ್ತು ಸೆಲೆಬ್ರಿಟಿಗಳು ಸೋಶಿಯಲ್ ಮೀಡಿಯಾ ಮೂಲಕ ಶುಭ ಕೋರಿದ್ದಾರೆ.
ರಾಧಿಕಾ ಪಂಡಿತ್ ಹಸೆಮಣೆ ಏರಿದ ನಂತರ ಅವರು ನಟಿಸಿದ ಏಕೈಕ ಸಿನಿಮಾ ಎಂದರೆ ಅದು ‘ಆದಿ ಲಕ್ಷ್ಮೀ ಪುರಾಣ’. ಆ ಬಳಿಕ ಅವರು ಯಾವುದೇ ಸಿನಿಮಾಗಳನ್ನೂ ಒಪ್ಪಿಕೊಳ್ಳಲಿಲ್ಲ. ಈಗ ಯಶ್ ಮತ್ತು ರಾಧಿಕಾ ದಂಪತಿಗೆ ಆಯ್ರಾ ಯಶ್ ಮತ್ತು ಯಥರ್ವ್ ಯಶ್ ಎಂಬ ಇಬ್ಬರು ಮುದ್ದಾದ ಮಕ್ಕಳು ಇದ್ದಾರೆ. ರಾಧಿಕಾ ಅವರು ಮಕ್ಕಳ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಆಗಾಗ ಹಂಚಿಕೊಳ್ಳುತ್ತಾರೆ. ಅವರು ಮತ್ತೆ ಸಿನಿಮಾದಲ್ಲಿ ನಟಿಸಬೇಕು ಎಂಬುದು ಅಭಿಮಾನಿಗಳ ಆಸೆಯಾಗಿದೆ.