ಕೇಕ್ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ.? ಸಾಮಾನ್ಯವಾಗಿ ಚಿಕ್ಕ ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಎಲ್ಲರೂ ಇಷ್ಟಪಟ್ಟು ತಿನ್ನುವ ತಿನಿಸು ಎಂದರೆ ಅದು ಕೇಕ್. ಬರ್ತಡೇ ದಿನ , ವಿವಾಹ ವಾರ್ಷಿಕೋತ್ಸವದ ಆಚರಣೆಗೆ ಹೀಗೇ ಹಲವಾರು ಆಚರಣೆಗೆ , ಸಂತಸದ ಕ್ಷಣಗಳ ಆಚರಣೆಯ ಸಲುವಾಗಿ ಹಲವಾರು ಜನರು ನಾನಾ ರೀತಿಯ ಕೇಕ್ ಗಳನ್ನು ತಂದು ಕಟ್ ಮಾಡಿ ಆಚರಿಸುತ್ತಾರೆ. ಈಗಂತೂ ಕೇಕ್ ಗಳಲ್ಲಿ ಸಾಕಷ್ಟು ವಿಧಗಳು ಬಂದಿವೆ. ಒಬ್ಬೊಬ್ಬರಿಗೂ ಒಂದೊಂದು ರೀತಿಯ ಕೇಕ್ ಇಷ್ಟ. ಬೇಕರಿಗಳಲ್ಲಿ ನಾವು ಹೇಳಿದ ಹಾಗೆಯೇ ಕೇಕ್ ತಯಾರಿಸಿಕೊಡುತ್ತಾರೆ . ಕೆಲವರಿಗೆ ಬೇಕರಿ ಕೇಕ್ ತಂದು ತಿನ್ನುವುದು ಅಂದರೆ ಅಷ್ಟಕ್ಕೇ ಅಷ್ಟೇ. ಇನ್ನು ಕೆಲವರು ಕೇಕ್ ಮಾಡುವಾಗ ಮೊಟ್ಟೆ ಬಳಕೆ ಮಾಡಿರುತ್ತಾರೆ ಎಂದು ಕೇಕ್ ತಿನ್ನಲು ಇಷ್ಟ ಪಡುವುದಿಲ್ಲ. ಅಂತವರಿಗಾಗಿ ನಾವು ಈ ಲೇಖನದಲ್ಲಿ ಸುಲಭವಾಗಿ ರುಚಿಯಾಗಿ ಶುಚಿಯಾಗಿ ಮನೆಯಲ್ಲಿಯೇ ಹನಿ ಕೇಕ್ ಹೇಗೆ ಮಾಡಬಹುದು ಅದೂ ಮೊಟ್ಟೆ ಹಾಗೂ ಓವೆನ್ ಇಲ್ಲದೆಯೇ ಬರೀ ಕುಕ್ಕರ್ ನಲ್ಲಿ ಹೇಗೆ ತಯಾರಿಸಬಹುದು ಎನ್ನುವುದನ್ನು ತಿಳಿಸಿಕೊಡುತ್ತೇವೆ.
ಹನಿ ಕೇಕ್ ಮಾಡುವ ವಿಧಾನ ಹಾಗೂ ಬೇಕಾಗುವ ಸಾಮಗ್ರಿಗಳು ಏನು ಎಂದು ನೋಡುವುದಾದರೆ , ಮೊದಲಿಗೆ ಕುಕ್ಕರ್ ಗೆ ಹಾಕಿಕೊಳ್ಳಲು ಬಟರ್ ಪೇಪರ್ ತಯಾರಿಸಿಕೊಳ್ಳಬೇಕು. ಎಲ್ಲರ ಮನೆಯಲ್ಲೂ ಬಟರ್ ಪೇಪರ್ ಇರುವುದಿಲ್ಲ ಹಾಗಿದ್ದಾಗ ಒಂದು a4 ಸೈಜ್ ನ ಬಿಳಿ ಹಾಳೆಯ ಎಣ್ಣೆ ಹಚ್ಚಿಕೊಂಡು ಅದನ್ನು ರೌಂಡ್ ಶೇಪ್ ನಲ್ಲಿ ಕತ್ತರಿಸಿ ಕುಕ್ಕರ್ ತಳಕ್ಕೆ ಹಾಕಿಕೊಳ್ಳಬೇಕು. ಇನ್ನೊಂದು ಕಡೆ ನಾವು ಪ್ರತೀ ದಿನ ದೋಸೆ ಮಾಡಲು ಬಳಸುವ ತವಾ ಅಥವಾ ಕಾವಲಿ ಅದನ್ನು ಸ್ಟೋವ್ ಮೇಲೆ ಇಟ್ಟು ಸಣ್ಣ ಉರಿಯಲ್ಲಿ ಬಿಸಿ ಆಗಲು ಇಟ್ಟುಕೊಳ್ಳಬೇಕು. ನಂತರ ಕೇಕ್ ಬ್ಯಾಟರ್ ಸಿದ್ಧ ಮಾಡಿಕೊಳ್ಳಬೇಕು.
ಇನ್ನು ಕೇಕ್ ಮಾಡಲು ಸಾಮಾನ್ಯವಾಗಿ ನಾವು ಮನೆಯಲ್ಲಿ ಬಳಸುವ ಪುಟ್ಟ ಪುಟ್ಟ ಟೀ ಕಪ್ ಇವುಗಳನ್ನು ಬಳಸಬಹುದು. ಅರ್ಧ ಕಪ್ ಮೊಸರು , ಅದೇ ಅಳತೆಯಲ್ಲಿ ಅಡುಗೆ ಎಣ್ಣೆ ಅರ್ಧ ಕಪ್ , ಸಕ್ಕರೆ ಎರಡು ಕಪ್ , ಮೈದಾ ಹಿಟ್ಟು ಎರಡು ಕಪ್ , ಬೇಕಿಂಗ್ / ಅಡಿಗೆ ಸೋಡಾ ಅರ್ಧ ಚಮಚ, ಬೇಕಿಂಗ್ ಪೌಡರ್ ಮುಕ್ಕಾಲು ಚಮಚ , ವೆನಿಲಾ ಎಸೆನ್ಸ್, ಉಪ್ಪು ಚಿಟಿಕೆ ಅಷ್ಟು. ಫ್ರೂಟ್ ಜಾಮ್ ಸ್ವಲ್ಪ.
ಕೇಕ್ ಮಾಡುವ ವಿಧಾನ ಹೇಗೆ ಎಂದು ನೋಡುವುದಾದರೆ , ಮೊದಲು ಒಂದು ಮಿಕ್ಸಿಂಗ್ ಬೌಲ್ ತೆಗೆದುಕೊಂಡು ಅದಕ್ಕೆ ಮೇಲೆ ಹೇಳಿದ ಹಾಗೆ ಅರ್ಧ ಕಪ್ ಮೊಸರು ಹಾಗೂ ಅರ್ಧ ಕಪ್ ಎಣ್ಣೆ ಹಾಗೂ ಒಂದು ಕಪ್ ಸಕ್ಕರೆ ಸೇರಿಸಿ ಸಕ್ಕರೆಯನ್ನು ಚೆನ್ನಾಗಿ ಕರಗಿಸಿಕೊಳ್ಳಬೇಕು. ಸಕ್ಕರೆ ಕರಗಿದ ನಂತರ ಎರಡು ಕಪ್ ಮೈದಾ ಹಿಟ್ಟನ್ನು ಸೇರಿಸಿ ಸ್ವಲ್ಪ ಕೂಡಾ ಗಂಟಿಲ್ಲದ ಹಾಗೆ ದೋಸೆ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಬೇಕು. ನಂತರ ಅದಕ್ಕೆ ಬೇಕಿಂಗ್ ಸೋಡಾ ಹಾಗೂ ಬೇಕಿಂಗ್ ಪೌಡರ್ ಚಿಟಿಕೆ ಉಪ್ಪು ಹಾಗೂ ವೆನಿಲ್ಲಾ ಎಸೆನ್ಸ್ ಹಾಕಿ ಮಿಕ್ಸ್ ಮಾಡಿ ನೇರವಾಗಿ ಮೊದಲೇ ಬಟರ್ ಪೇಪರ್ ಹಾಕಿ ರೆಡಿ ಮಾಡಿ ಇಟ್ಟುಕೊಂಡ ಕುಕ್ಕರ್ ಗೆ ಹಾಕಿ ಗ್ಯಾಸ್ಕೆಟ್ ಸಮೇತ ಕುಕ್ಕರ್ ಮುಚ್ಚಳ ಮುಚ್ಚಿ ಕುಕ್ಕರ್ ವಿಶಿಲ್ ತೆಗೆದು ಕಾದ ಕಾವಲಿಯ ಮೇಲೆ ಇಟ್ಟು ಇಪ್ಪತ್ತು ನಿಮಿಷಗಳ ಕಾಲ ಚೆನ್ನಾಗಿ ಬೇಯಿಸಬೇಕು. ಇಪ್ಪತ್ತು ನಿಮಿಷದ ನಂತರ ಕುಕ್ಕರ್ ಕೆಳಗೆ ಇಳಿಸಿ ತಣ್ಣಗಾಗಲು ಬಿಟ್ಟು ಒಂದು ಟೂತ್ ಪಿಕ್ ಸಹಾಯದಿಂದ ಕೇಕ್ ಚೆಕ್ ಮಾಡಿ ನೋಡಿ ಬಂದಿದೆಯೋ ಇಲ್ಲವೋ ಎಂದು. ಟೂತ್ ಪಿಕ್ ಗೆ ಕೇಕ್ ಅಂಟಿಕೊಳ್ಳದೆ ಇದ್ದರೆ ಕೇಕ್ ಬೆಂದಿದೆ ಎಂದು ಅರ್ಥ. ಬೇಯದೆ ಇದ್ದರೆ ಇನ್ನೊಂದು ಹತ್ತು ನಿಮಿಷ ಸಣ್ಣ ಉರಿಯಲ್ಲಿ ಬೇಯಿಸಬೇಕು.
ಕೇಕ್ ಸಂಪೂರ್ಣ ತಣ್ಣಗೆ ಆದ ನಂತರ ಟೂತ್ ಪಿಕ್ ಸಹಾಯದಿಂದ ಎಲ್ಲಾ ಕಡೆ ಚುಚ್ಚಿಕೊಂಡು ನಂತರ ಅದಕ್ಕೆ ಸ್ವಲ್ಪ ಸಕ್ಕರೆ ನೀರನ್ನು ಸಿಂಪಡಿಸಬೇಕು. ನಂತರ ಒಂದು ಪ್ಯಾನ್ ಗೆ ಫ್ರೂಟ್ ಜಾಮ್ ಹಾಗೂ ಸ್ವಲ್ಪ ಸಕ್ಕರೆ ನೀರನ್ನು ಹಾಕಿ ಜಾಮ್ ಕರಗಿಸಿಕೊಂದು ಬಿಸಿ ಇರುವಾಗಲೇ ಕೇಕ್ ಮೇಲೆ ಹರಡಿ. ನಂತರ ಬೇಕೆನಿಸಿದರೆ ತೆಂಗಿನ ತುರಿಯಿಂದ ಅಲಂಕರಿಸಿದರೆ ಮೊಟ್ಟೆ ಇಲ್ಲದೆ ರುಚಿಯಾಗಿ ಶುಚಿಯಾಗಿ ಮನೆಯಲ್ಲೇ ತಯಾರಿಸಿದ ಹನಿ ಕೇಕ್ ಸವಿಯಲು ಸಿದ್ದ.