ಅಡಿಕೆ ಬೆಳೆ ಉಷ್ಣ ಬೆಳೆ, ದಕ್ಷಿಣ ಕನ್ನಡದ ಸರಿ ಸುಮಾರು ಜಾಗಗಳು ಈ ಬೆಳೆಗೆ ಪೂರಕವಾಗುತ್ತವೆ. ಗುಡ್ಡ ಭಾಗದ ಜಾಗಗಳಂತೂ ಅಡಿಕೆ ಬೆಳೆಯುವದಕ್ಕೆ ಬಹಳ ಉತ್ತಮವಾಗಿದೆ. ಅಡಿಕೆ ಮರಗಳಿಗೆ ಗೊಬ್ಬರದ ಜೊತೆಗೆ ಪ್ರತಿದಿನ 30 ಲೀಟರ್ ನೀರುಣಿಸಿದರೆ 4 ರಿಂದ 6 ಕೆಜಿ ಪ್ರತಿ ಮರದಿಂದ ಅಡಿಕೆ ಬೆಳೆ ಬೆಳೆಯಬಹುದು ಎನ್ನುವ ಅಭಿಪ್ರಾಯ ತಜ್ಞರದ್ದು. ಅಡಿಕೆ ಮಾರಗಳಿಗೆ ಇತ್ತೀಚಿನ ದಿನಗಳಲ್ಲಿ ಉತ್ತಮ ಧಾರಣೆಯಿಂದ ಕೂಡಿದೆ. ಅಡಿಕೆ ವಾಣಿಜ್ಯ ಬೆಳೆ ಎಲ್ಲರನ್ನೂ ಆಕರ್ಷಸುತ್ತದೆ. ಹಾಗಾದ್ರೆ ಎಲ್ಲಿ ಹೇಗೆ ಯಾವ ಸಮಯದಲ್ಲಿ ಬೆಳೆಯಬಹುದು ಎನ್ನುವುದನ್ನು ನೋಡೋಣ.
ಪ್ರಥಮವಾಗಿ ನೀವು ಯಾವ ತಳಿಗಳನ್ನು ಬೆಳೆಸಲು ಉತ್ಸುಕಾರಾಗಿದ್ದೀರಾ? ಊರ ತಳಿ ಎಂದರೆ ಫಸಲು ಆರಂಭವಾಗಲು ಕನಿಷ್ಠ ಆರು ವರ್ಷಗಳು ಬೇಕು. ಇಲ್ಲಿ ಇಡೀ ಕೃಷಿ ಮಾಡುತ್ತಾ ಜೀವಮಾನ ಪರ್ಯಂತ ತೋಟ ನಿರ್ವಹಿಸಬಹುದು.ಮಂಗಳ ಎಂದರೆ ಮೂರು ವರ್ಷದಲ್ಲಿ ಫಸಲೂ ಆರಂಭವಾಗುತ್ತದೆ. ಇನ್ನೂ ಅನೇಕ ಆಧುನಿಕ ತಳಿಗಳಿವೆ ಸರ್ವೇ ಸಾಮಾನ್ಯ ಎಲ್ಲವೂ ಹೀಗೆ ಫಸಲು ಆರಂಭಿಸುತ್ತದೆ. ಇತ್ತೀಚಿನ ದಿನಗಳಲ್ಲಿ ವಾಣಿಜ್ಯ ಬೆಳೆಯಾಗಿ ಅಡಿಕೆ ಬೆಳೆಸುವುದು ಸಾಮಾನ್ಯ. ಹೀಗಿರುವಾಗ ಅಧಿಕ ಬೆಳೆ ಬೆಳೆದು, ಕೇವಲ 20 ವರ್ಷ ಸಮಯದಲ್ಲಿ ಮತ್ತೆ ಮರಗಳನ್ನು ಕಟಾವು ಮಾಡಿ ಹೊಸ ಗಿಡಿಗಳನ್ನು ಹಾಕುವುದು ಲಾಭಧಾಯಕವಾಗಿದೆ.
ರಾಸಾಯನಿಕ ಪದ್ಧತಿ ಮತ್ತು ಸಾವಯವ ಪದ್ಧತಿ ಎಂಬ ಎರಡು ವಿಧಾನಗಳಲ್ಲಿ ಅಡಿಕೆ ಕೃಷಿಯನ್ನು ಕೈಗೊಳ್ಳಬಹುದು. ಸಾವಯವ ಪದ್ಧತಿಯಲ್ಲಿ ಸಾಕಷ್ಟು ಕೊಟ್ಟಿಗೆ ಗೊಬ್ಬರ, ಹಸಿರು ಸೊಪ್ಪು, ಸೆಗಣಿ ಗಂಜಲ, ಹೆಚ್ಚುವರಿಯಾಗಿ ಆಡು ಕೋಳಿ ಗೊಬ್ಬರಗಳು ಬಳಸುವುದು ಸಾಮಾನ್ಯ, ಭೂಮಿಯ ಫಲವತ್ತತೆ ದೀರ್ಘಕಾಲ ಉಳಿಯುತ್ತದೆ.ಅಡಿಕೆ ಸಸಿಗಳನ್ನು ಮಾಡಲು ಡಿಸೆಂಬರ್ ತಿಂಗಳಲ್ಲಿ ಹಣ್ಣು ಅಡಿಕೆಗಳನ್ನು ಆರಿಸಿ 8 ದಿನ ಒಣಗಿಸಬೇಕು. ಆರು ಇಂಚಿನ ಎತ್ತರದ ಮಣ್ಣಿನ ಮಡಿಗಳನ್ನು ಮಾಡಿ ಅಡಿಕೆಗಳನ್ನು ನೇರವಾಗಿ ಹೂಳಬೇಕು ಮೇಲ್ಪದರ ಒಂದು ಇಂಚಿನಷ್ಟು ಮೇಲೆ ಮಣ್ಣು ನಿಲ್ಲಬೇಕು, ತರಗೆಲೆಯಿಂದ ಮೇಲ್ಭಾಗ ಮುಚ್ಚಬೇಕು, ದಿನಾ ನೀರು ಬಿಡುತ್ತಾ ಬರಬೇಕು,
ಬಿಸಿಲು ಜಾಸ್ತಿ ಬೀಳದಂತೆ ಶೆಡ್ ನೆಟ್ ಉಪಯೋಗಿಸಿ ಚಪ್ಪರ ಹಾಕಬೇಕು. ಇತರೆ ಪ್ರಾಣಿಗಳ ಹಾವಳಿ ಇದ್ದರೆ ಸುತ್ತ ಬಂದೋಬಸ್ತು ಮಾಡಬೇಕು. ಸರಿ ಸುಮಾರು 45 ದಿನಗಳಲ್ಲಿ ಮೊಳಕೆ ಹೊಡೆದು ಒಂದೇ ಸಮನೆ ಬಂದಿರುವ ಅಡಿಕೆ ಗಿಡಗಳನ್ನು ಆರಿಸಿ, ಮರುಳು ಮತ್ತು ಗಾಳಿಸಿದ ಕೆಂಪು ಮಣ್ಣು ಕೊಳೆತ ತರೆಗೆಲೆ ಹುಡಿ ಸಾಧ್ಯವಾದರೆ ಕಾಡಿನ ಮಣ್ಣು ಎಲ್ಲವನ್ನು ಬೆರೆಸಿ ಲಕೋಟಿಯಲ್ಲಿ ತುಂಬಿಸಿ ಸಿದ್ಧ ಪಡಿಸಬೇಕು. ಆ ಲಾಕೋಟೆಯಲ್ಲಿ ಚಿಕ್ಕ ಗಿಡಗಳನ್ನು ಇಟ್ಟು ಅಡಿ ಭಾಗವನ್ನು ಮುಚ್ಚಬೇಕು.ಈ ಗಿಡಗಳನ್ನು ಗುಡ್ಡೆ ಜಾಗದಲ್ಲಿ ಜೂನ್ ತಿಂಗಳಲ್ಲಿ ನೆಡವುದಕ್ಕೆಸೂಕ್ತವಾಗಿರುತ್ತದೆ.
ರಾಸಾಯನಿಕ ಪದ್ಧತಿಯಲ್ಲಿ ರಾಸಾಯನಿಕ ಗೊಬ್ಬರಗಳನ್ನು ತಜ್ಞರ ಸಲಹೆ ಮೇರೆಗೆ ಕೊಡಬೇಕು.ರಾಸಾಯನಿಕ ಗೊಬ್ಬರ ಬಳಸುವಾಗ ಗಿಡಗಳಿಗೆ ಸಾಕಷ್ಟು ನೀರುಣಿಸಬೇಕು, ಹನಿ ನೀರಾವರಿ ಪದ್ಧತಿಯಿಂದ ಸ್ಪ್ರಿಂಕ್ಲರ್ ನೀರಾವರಿಗಿಂತ ಹತ್ತನೇ ಒಂದು ಭಾಗ ನೀರು ಸಾಕು, ಸತತವಾಗಿ ಮೂರು ವರ್ಷಗಳ ಕಾಲ ಬೆಳೆಸಿದಾಗ ಗಿಡ ಬೆಳವಣಿಗೆ ಕಂಡು ಪ್ರಥಮ ಹಿಂಗಾರು ಆರಂಭವಾಗುತ್ತದೆ.