ಶನಿದೇವರಿಗೆ ಸಾಸಿವೆ ಎಣ್ಣೆ ಸಮರ್ಪಣೆ ಮಾಡಿದರೆ ಒಳ್ಳೆಯದೆ ಅಗುತ್ತದೆ ಎನ್ನುವ ನಂಬಿಕೆ ಎಲ್ಲರಿಗೂ ಇದೆ. ಅದೂ ಅಲ್ಲದೆ, ಶನಿವಾರ ಆಂಜನೇಯ ಸ್ವಾಮಿಯ ಪೂಜೆಗೆ ಹೆಚ್ಚು ಮಹತ್ವ ಇದೆ. ಶನಿವಾರ ಆಂಜನೇಯ ಸ್ವಾಮಿಯನ್ನು ಪೂಜೆ ಮಾಡುವವರಿಗೆ ಶನಿಮಹಾತ್ಮನ ಆಶೀರ್ವಾದ ದೊರಕುತ್ತದೆ ಎನ್ನುವುದು ಕೂಡ ನಂಬಿಕೆ. ಶನಿದೇವರನ್ನು ನ್ಯಾಯದ ದೇವರು ಎಂದೂ ಕರೆಯಲಾಗುತ್ತದೆ. ಯಾಕೆಂದರೆ, ಮನುಷ್ಯರ ಕರ್ಮಕ್ಕೆ ಅನುಗುಣವಾಗಿ ಶನಿದೇವರು ಕರ್ಮಫಲ ಕೊಡುತ್ತಾರೆ.
ಶನಿವಾರದಂದು ಎಲ್ಲರೂ ಶನಿಮಹಾತ್ಮನಿಗೆ ಪೂಜೆ ಸಲ್ಲಿಸುತ್ತಾರೆ. ಆದರೆ, ಶನಿವಾರ ಶನಿದೇವನಿಗೆ ಸಾಸಿವೆ ಎಣ್ಣೆಯನ್ನು ಅರ್ಪಿಸಲಾಗುತ್ತದೆ. ಇದರ ಹಿಂದೆ ಇರುವ ಉದ್ದೇಶ ಏನು?, ಯಾಕೆ? ಎಂದು ತಿಳಿಯೋಣ.
ಆಂಜನೇಯ ಸ್ವಾಮಿ ಮತ್ತು ಶನಿ ದೇವರು ಎದುರಾದ ವಿಚಾರ :– ಆಂಜನೇಯ ಸ್ವಾಮಿ ರಾಮಸೇತು ಹತ್ತಿರ ಧ್ಯಾನದಲ್ಲಿ ಮಗ್ನವಾಗಿ ಕುಳಿತ್ತಿದ್ದ ಸಮಯ. ಅದೇ ಸಮಯಕ್ಕೆ ಅದೇ ದಾರಿಯಲ್ಲಿ ಶನಿ ದೇವರ ಆಗಮನವಾಗುತ್ತದೆ. ಧ್ಯಾನ ಮಗ್ನನಾಗಿ ಕುಳಿತಿದ್ದ ಆಂಜನೇಯನನ್ನು ಕಂಡ ಶನಿಗೆ ಹನುಮಂತನಿಗಿಂತ ಶಕ್ತಿಶಾಲಿಗಳು ಇಡಿ ಬ್ರಹ್ಮಾಂಡದಲ್ಲಿ ಯಾರೂ ಇಲ್ಲ ಎಂದು ಯಾಕೆ? ಎಲ್ಲರೂ ನಂಬಿದ್ದಾರೆ ಎನ್ನುವ ಪ್ರಶ್ನೆ ಮೂಡಿತ್ತು.
ತನಗಿಂತ ಆಂಜನೇಯ ಶಕ್ತಿಶಾಲಿಯೇ ಎಂದು ಪರೀಕ್ಷೆ ಮಾಡುವ ಮನಸ್ಸಾಗಿತ್ತು ಶನಿಮಹಾತ್ಮನಿಗೆ. ಆಗಾಗಿ ಆಂಜನೇಯನ ಬಳಿ ಬಂದು ನಾವಿಬ್ಬರು ಯಾಕೆ ಯುದ್ಧ ಮಾಡಬಾರದು ಎಂದು ಶನಿ ದೇವರು ಆಂಜನೇಯ ಸ್ವಾಮಿಯನ್ನು ಆಹ್ವಾನ ಮಾಡುತ್ತಾರೆ. ಇದು ನಾನು ಪೂಜೆ ಮಾಡುವ ಸಮಯ. ನಾನೀಗ ಧ್ಯಾನದಲ್ಲಿದ್ದೇನೆ. ನೀನು ಬೇರೆ ಕಡೆ ಹೋಗಿ ಬೇರೆಯವರೊಂದಿಗೆ ಸಮರ ಮಾಡು ಎಂದು ಶನಿದೇವನಿಗೆ ಹೇಳುತ್ತಾರೆ. ಅಂದರೆ, ಶನಿದೇವರನ್ನು ಸಮಾಧಾನ ಮಾಡಿ ಅಲ್ಲಿಂದ ಕಳಿಸಲು ಆಂಜನೇಯ ಸ್ವಾಮಿ ಪ್ರಯತ್ನ ಮಾಡಿದ್ದರು.
ಆ ರೀತಿ ಹೇಳಿದ ಬಳಿಕ ಭಜರಂಗಿ ಮತ್ತೆ ತಮ್ಮ ಧ್ಯಾನದಲ್ಲಿ ಮುಳುಗಿ ಹೋಗುವರು. ಆಂಜನೇಯ ಸ್ವಾಮಿ ಮೇಲೆ ಶನಿ ದೇವರಿಗೆ ಅಖಂಡ ಕೋಪ ಬಂತು. ಅವರ ಮಾತನ್ನು ಆಲಿಸದೆ ಮತ್ತೆ ಧ್ಯಾನಕ್ಕೆ ಸಿದ್ಧನಾದ ಆಂಜನೇಯ ಸ್ವಾಮಿಯನ್ನು ಕಂಡು ಶನಿದೇವರಿಗೆ ಕೆಂಡದಂತಹ ಕೋಪ ಬಂತು. ಆಗಾಗಿ, ಧ್ಯಾನದಲ್ಲಿ ಕುಳಿತಿದ್ದ ಆಂಜನೇಯ ಸ್ವಾಮಿಯ ಹತ್ತಿರ ಬಂದ ಶನಿದೇವರು ಹೊಡೆಯಲು ಪ್ರಾರಂಭ ಮಾಡುತ್ತಾರೆ.
ಈ ಸಮಯದಲ್ಲಿ ಆಂಜನೇಯ ಸ್ವಾಮಿ ಅವರ ಬಾಲದ ಸಹಾಯದಿಂದ ಶನಿ ದೇವರನ್ನು ಬಿಗಿಯಾಗಿ ಬಂಧಿಸಿ ಧ್ಯಾನದಲ್ಲಿ ಮಗ್ನರಾಗುತ್ತಾರೆ. ಬಳಿಕ ರಾಮಸೇತು ಬಳಿ ಆಂಜನೇಯ ಸ್ವಾಮಿ ಎಂದಿನಂತೆ ವಿಹಾರ ಕೂಡ ಮಾಡುತ್ತಾರೆ. ಆಗಲೂ ಶನಿ ಆಂಜನೇಯನ ಬಿಗಿಯಾದ ಮತ್ತು ಬಲಿಷ್ಟವಾದ ಬಂಧನಲ್ಲಿರುತ್ತಾರೆ. ಈ ಬಂಧನದಿಂದ ಬಿಡಿಸಿಕೊಳ್ಳಲು ಎಷ್ಟು ಪ್ರಯತ್ನಿಸಿದರೂ ಶನಿದೇವರಿಗೆ ಅದು ಸಾಧ್ಯವಾಗಿರಲಿಲ್ಲ. ಅಷ್ಟರಲ್ಲಿ ಶನಿದೇವರಿಗೆ ಸಾಕಷ್ಟು ಗಾಯಗಳೂ ಆಗಿದ್ದವಂತೆ.
ತಪ್ಪಿನ ಅರಿವಾಗುವ ಮುನ್ನ ಹನುಮಂತ ಸಂಪೂರ್ಣವಾಗಿ ಶ್ರೀರಾಮನ ಸ್ಮರಣೆಯಲ್ಲಿ ತನ್ನನ್ನು ತಾನೇ ಮರೆತಿದ್ದ. ಶ್ರೀರಾಮ ದೇವರ ಪ್ರಾರ್ಥನೆಯ ಬಳಿಕ ಆಂಜನೇಯ ಸ್ವಾಮಿಗೆ ಶನಿದೇವರ ನೆನಪಾಗಿತ್ತು. ನಂತರ ಶನಿದೇವರನ್ನು ಬಿಡುಗಡೆ ಮಾಡಿದರು. ಇದೆಲ್ಲಾ ಮುಗಿದ ಬಳಿಕ ಶನಿ ದೇವರಿಗೆ ಅವರ ತಪ್ಪಿನ ಅರಿವಾಗಿತ್ತು. ಆಗಾಗಿ, ಆಂಜನೇಯ ಸ್ವಾಮಿ ಬಳಿ ಶನಿದೇವರು ಕ್ಷಮೆಯನ್ನೂ ಕೇಳಿದರು.
ಅವರ ಗಾಯಗಳ ಉಪಶಮನಕ್ಕೆ ಸಾಸಿವೆ ಎಣ್ಣೆಯನ್ನು ನೀಡುವಂತೆ ಹನುಮಂತನ ಬಳಿ ಕೇಳುತ್ತಾರೆ. ಅದರಿಂದ, ಹನುಮಂತ ಶನಿದೇವರಿಗೆ ಸಾಸಿವೆ ಎಣ್ಣೆಯನ್ನು ನೀಡುತ್ತಾರೆ. ಇದರಿಂದ ಶನಿದೇವರಿಗೆ ಆಗಿದ್ದ ಗಾಯಗಳೆಲ್ಲಾ ವಾಸಿಯಾದವಂತೆ. ಆಂಜನೇಯ ಸ್ವಾಮಿ ನೀಡಿದ ಸಾಸಿವೆ ಎಣ್ಣೆಯಿಂದ ಶನಿ ಮಹಾತ್ಮನ ಗಾಯಗಳೆಲ್ಲಾ ಗುಣವಾಗಿದ್ದವು. ಹಾಗೆ ಶನಿದೇವರಿಗೆ ಆಂಜನೇಯ ಸ್ವಾಮಿಯ ಶಕ್ತಿಯ ಬಗ್ಗೆಯೂ ಅರಿವಾಗಿತ್ತು. ಆಗಾಗಿ, ಇದೇ ನೆನಪಿನಲ್ಲಿ ಶನಿವಾರದಂದು ತನಗೆ ಸಾಸಿವೆ ಎಣ್ಣೆಯನ್ನು ಅರ್ಪಿಸುವ ಭಕ್ತರಿಗೆ ಅನುಗ್ರಹ ಪ್ರಾಪ್ತಿಯಾಗುತ್ತದೆ ಎಂದು ಶನಿ ದೇವರು ಹೇಳಿದ್ದಾರೆ ಎನ್ನುವ ನಂಬಿಕೆ.
ಅಂದಿನಿಂದ ಶ್ರೀರಾಮ ಮತ್ತು ಆಂಜನೇಯ ಸ್ವಾಮಿಯ ಭಕ್ತರು ಶನಿಯ ವಿಶೇಷ ಆಶೀರ್ವಾದ ಪಡೆಯುತ್ತಾರೆ ಎಂಬ ನಂಬಿಕೆ ಕೂಡಾ ನಮ್ಮಲ್ಲಿದೆ. ಶನಿದೇವರನ್ನು ಮೆಚ್ಚಿಸಲು, ವಿಶೇಷ ಅನುಗ್ರಹವನ್ನು ಪಡೆಯಲು ಸಾಸಿವೆ ಎಣ್ಣೆಯನ್ನು ಅರ್ಪಿಸಲಾಗುತ್ತದೆ. ಸಾಸಿವೆ ಎಣ್ಣೆಯ ದೀಪವನ್ನು ಬೆಳಗುವುದು ಕೂಡ ವಾಡಿಕೆ. ಶನಿವಾರ ಆಂಜನೇಯ ಸ್ವಾಮಿಯ ಪೂಜೆ ಮಾಡಿದವರಿಗೂ ಶನಿದೇವರ ಆಶೀರ್ವಾದ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ನಮ್ಮಲ್ಲಿದೆ ಹಾಗೂ ಕಪ್ಪು ವಸ್ತುಗಳ ಪ್ರಿಯ ಶನಿದೇವರು.
ಶನಿವಾರ ಶನಿದೇವರಿಗೆ ಸಮರ್ಪಿತವಾದ ವಾರ. ಶನಿವಾರ ಶನಿದೇವರ ಪೂಜೆ ಮಾಡುವುದಕ್ಕೂ ಹೆಚ್ಚು ಮಹತ್ವವಿದೆ. ಈ ದಿನ ಶನಿದೇವರ ಪೂಜೆಯನ್ನು ಮಾಡಿದರೆ ಕಷ್ಟಗಳು ದೂರವಾಗುತ್ತವೆ ಎಂಬ ನಂಬಿಕೆ ಇದೆ. ಇನ್ನು ಶನಿ ದೇವರಿಗೆ ಕಪ್ಪು ವಸ್ತುಗಳು ಪ್ರಿಯ. ಇದೇ ಕಾರಣದಿಂದ ಸಾಸಿವೆ ಎಣ್ಣೆ ಮತ್ತು ಕಪ್ಪು ಎಳ್ಳುಗಳನ್ನು ದೇವರಿಗೆ ಅರ್ಪಿಸಲಾಗುತ್ತದೆ. ಇವೆಲ್ಲವನ್ನೂ ಬಳಸಿ ಪೂಜೆ ಮಾಡುವುದರಿಂದ ಮಂಗಳಕರ ಫಲಿತಾಂಶ ಲಭಿಸುತ್ತದೆ ಎಂಬುದು ಆಸ್ತಿಕರ ಬಲವಾದ ನಂಬಿಕೆ. ಶನಿವಾರ ಅಶ್ವತ್ಥ ಮರದ 11 ಎಲೆಗಳನ್ನು ತೆಗೆದುಕೊಂಡು ಹಾರವನ್ನು ಮಾಡಿ ಅದನ್ನು ಹತ್ತಿರದ ಶನಿ ದೇವಸ್ಥಾನಕ್ಕೆ ಅರ್ಪಣೆ ಮಾಡಿದರು ಒಳ್ಳೆಯದೆ ಆಗುತ್ತದೆ ಎನ್ನುವ ನಂಬಿಕೆ ಇದೆ. ಅಶ್ವತ್ಥದ ಮರಕ್ಕೆ ಏಳು ಬಾರಿ ಪ್ರದಕ್ಷಿಣೆ ಬಂದು ಹಸಿ ಹತ್ತಿಯ ದಾರವನ್ನು ಏಳು ಬಾರಿ ಸುತ್ತಿದರೂ ಮಂಗಳಕರ ಎಂದು ಪರಿಗಣಿಸಲಾಗುತ್ತದೆ.
ಶನಿವಾರ ಆಂಜನೇಯ ಸ್ವಾಮಿಯನ್ನೂ ಎಲ್ಲರೂ ಭಕ್ತಿಯಿಂದ ನಮಿಸುತ್ತಾರೆ. ಆಂಜನೇಯ ಸ್ವಾಮಿಯ ಆರಾಧನೆಯಿಂದಲೂ ಶನಿಯ ಅನುಗ್ರಹ ಪಡೆಯಬಹುದು ಎನ್ನುವುದು ಪ್ರತೀತಿ. ಅಂಜನೇಯ ಸ್ವಾಮಿ ಶನಿ ದೇವರ ನೇರ ದೃಷ್ಟಿಯಿಂದ ರಕ್ಷಣೆ ಕೊಡುತ್ತಾರೆ.