ಸಾಧಿಸುವ ಛಲದೊಂದಿಗೆ ಹೆಚ್ಚಿನ ಶ್ರಮವಿದ್ದರೆ ಖಂಡಿತ ಯಶಸ್ಸನ್ನು ಪಡೆಯಬಹುದು. ಹೌದು 13 ವರ್ಷಗಳ ಹಿಂದೆ ಬಂಜರು ಭೂಮಿಯಲ್ಲಿ ಬೆಳೆ ಬೆಳೆಯಲಾಗದೆ ಬಾಗಲಕೋಟೆಯಿಂದ ಕುಟುಂಬ ಸಮೇತರಾಗಿ ಮಂಗಳೂರಿಗೆ ಬಂದ ರವಿ ಪವಾರ್ ಈಗ ಮಂಗಳೂರಿನ ಕೊಣಾಜೆ ಠಾಣೆಯಲ್ಲಿ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ಆಗುವ ಮೂಲಕ ಯುವಕರಿಗೆ ಸ್ಫೂರ್ತಿಯಾಗಿದ್ದಾರೆ. ಪೀರು ಪವಾರ್ ಅವರಿಗೆ ನಾಲ್ವರು ಮಕ್ಕಳು. ಇಬ್ಬರು ಹೆಣ್ಣು ಮಕ್ಕಳು ಊರಲ್ಲೇ ನೆಲೆಸಿದರೆ, ಗಂಡು ಮಕ್ಕಳಾದ ರವಿ ಹಾಗೂ ಮೋಹನ್ ತಮ್ಮ ತಂದೆ-ತಾಯಿ ಜೊತೆಗೆ ಮಂಗಳೂರಿಗೆ ಬಂದರು.

ಕೂಲಿ ಕೆಲಸ ಮಾಡುತ್ತಿದ್ದ ಪೀರು ಕುಟುಂಬ ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿರುವ ಪಾಳು ಬಿದ್ದಿರುವ ಕಾರ್ಖಾನೆಯೊಂದರ ಕಟ್ಟಡದಲ್ಲಿ ವಾಸವಿದ್ದರು. ಅಲ್ಲೇ ಪಕ್ಕದಲ್ಲಿರುವ ಸರ್ಕಾರಿ ಪ್ರೌಢಶಾಲೆಯಲ್ಲಿ ರವಿ ೮ನೇ ತರಗತಿ, ಮೋಹನ್ ೫ನೇ ತರಗತಿಗೆ ಸೇರಿದರು. ಮೂಲಭೂತ ಸೌಕರ್ಯವಿಲ್ಲದ ಕಟ್ಟಡದಲ್ಲಿ ವಿದ್ಯಾಭ್ಯಾಸ ನಡೆಸಿನಡೆಸಿದರು.

ರವಿ ಎಸ್‌ಎಸ್‌ಎಲ್‌ಸಿಯಲ್ಲಿ ೫೨೩ ಅಂಕಗಳೊಂದಿಗೆ ಶಾಲೆಗೆ ಟಾಪರ್ ಆಗಿದ್ದು ಬಳಿಕ ಗೋಕರ್ಣನಾಥ ಕಾಲೇಜಿನಲ್ಲಿ ಪದವಿ ಪೂರ್ವ ಶಿಕ್ಷಣ ಮುಗಿಸಿ ನಂತರ ನಿಟ್ಟೆ ಇಂಜಿನಿಯರಿಂಗ್ ಕಾಲೇಜಿನಲ್ಲಿ ಇನ್ಫಾರ್ಮೇಶನ್ ಸೈನ್ಸ್ ಓದಿದರು.

ತಾಯಿ ಸುಮಿತ್ರಾ ಕೂಲಿ ಜೊತೆಗೆ ಗುಜರಿ ಹೆಕ್ಕಿ ರವಿ ಓದಿಗೆ ಇನ್ನಷ್ಟು ನೆರವಾದರು. ರವಿ ಕೂಡಾ ಕೂಲಿ ಕೆಲಸಕ್ಕೆ ಹೋದರು. ಸೋದರ ಮೋಹನ್ ಕೂಡಾ ಅಣ್ಣನಿಗಾಗಿ ಎಸ್‌ಎಸ್‌ಎಲ್‌ಸಿ ಬಳಿಕ ಶಿಕ್ಷಣ ಮೊಟಕುಗೊಳಿಸಿದರು. ಎಂಜಿನಿಯರಿಂಗ್ ಪದವಿ ಪಡೆದ ಮೇಲೆ ಕೆಲದಿನ ಬೆಂಗಳೂರಿನ ಖಾಸಗಿ ಸಂಸ್ಥೆಯಲ್ಲಿ ನೌಕರಿ ಮಾಡಿದರು. ಆದರೆ, ರವಿ ಅಷ್ಟಕ್ಕೇ ತೃಪ್ತಿ ಪಡಲಿಲ್ಲ. ಮುಂದೇನು ಎಂದು ಯೋಚಿಸುವಾಗಲೇ ಅದೊಂದು ದಿನ ಸಬ್‌ಇನ್ಸ್‌ಪೆಕ್ಟರ್ ಹುದ್ದೆಗೂ ಅರ್ಜಿ ಸಲ್ಲಿಸಿದ್ದರು.

ಪರೀಕ್ಷೆಯಲ್ಲಿ ೨೨ನೇ ಸ್ಥಾನ ಪಡೆದಾಗ ಸಂತೋಷಕ್ಕೆ ಪಾರವೇ ಇರಲಿಲ್ಲ. ಇದೀಗ ಎರಡು ವರ್ಷಗಳ ಪ್ರೊಬೇಷನರಿ ಅವಧಿ ಮುಗಿಸಿ ಕೊಣಾಜೆ ಠಾಣೆಯಲ್ಲಿ ಪೂರ್ಣಕಾಲಿಕ ಸಬ್‌ಇನ್ಸ್‌ಪೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕುಟುಂಬ ಸಮೇತರಾಗಿ ಅಸೈಗೋಳಿಯಲ್ಲಿರುವ ಪೊಲೀಸ್ ವಸತಿ ಗೃಹದಲ್ಲಿ ನೆಲೆಸಿದ್ದಾರೆ. ತಮ್ಮ ಮೋಹನ್ ಶಿವಮೊಗ್ಗದಲ್ಲಿ ಖಾಸಗಿ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

LEAVE A REPLY

Please enter your comment!
Please enter your name here